Advertisement

ದಕ್ಷಿಣ ಆಫ್ರಿಕಾದ ಸ್ಟಾರ್‌ ಆಲ್‌ರೌಂಡರ್‌: ಪ್ರಿಟೋರಿಯಸ್‌ ಕ್ರಿಕೆಟ್‌ ವಿದಾಯ

11:20 PM Jan 09, 2023 | Team Udayavani |

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಬೌಲಿಂಗ್‌ ಆಲ್‌ರೌಂಡರ್‌ ಡ್ವೇನ್‌ ಪ್ರಿಟೋರಿಯಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಟಿ20 ಲೀಗ್‌ ಹಾಗೂ ಇತರ ಕಿರು ಮಾದರಿಯ ಕ್ರಿಕೆಟ್‌ನಲ್ಲಿ ಮುಂದುವರಿಯುವುದು ಅವರ ಯೋಜನೆಯಾಗಿದೆ.

Advertisement

33 ವರ್ಷದ ಡ್ವೇನ್‌ ಪ್ರಿಟೋರಿಯಸ್‌ ದಕ್ಷಿಣ ಆಫ್ರಿಕಾ ಪರ 30 ಟಿ20, 27 ಏಕದಿನ ಹಾಗೂ 3 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದಾರೆ. ಕ್ರಮವಾಗಿ 35, 35 ಹಾಗೂ 3 ವಿಕೆಟ್‌ ಕೆಡವಿದ್ದಾರೆ. 261, 192 ಹಾಗೂ 83 ರನ್‌ ಮಾಡಿದ್ದಾರೆ.

ಪ್ರಿಟೋರಿಯಸ್‌ 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ದಕ್ಷಿಣ ಆಫ್ರಿಕಾ ಟಿ20 ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದ ಹೆಗ್ಗಳಿಕೆ ಇವರದಾಗಿದೆ. 2021ರ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಅವರು 17 ರನ್ನಿತ್ತು 5 ವಿಕೆಟ್‌ ಕೆಡವಿದ್ದು ದಾಖಲೆಯಾಗಿ ಉಳಿದಿದೆ.

ಕಠಿನ ನಿರ್ಧಾರ
“ಕೆಲವು ದಿನಗಳ ಹಿಂದೆ ನಾನು ನನ್ನ ಕ್ರಿಕೆಟ್‌ ಬದುಕಿನ ಅತ್ಯಂತ ಮಹತ್ವದ ಹಾಗೂ ಕಠಿನ ನಿರ್ಧಾರವೊಂದನ್ನು ತೆಗೆದುಕೊಂಡೆ. ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ನಿರ್ಧಾರ ಇದಾಗಿತ್ತು. ಉಳಿದ ಅವಧಿಯನ್ನು ಟಿ20 ಲೀಗ್‌ ಹಾಗೂ ಇತರ ಕಿರು ಮಾದರಿಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವುದು ನನ್ನ ಮುಂದಿನ ಯೋಜನೆ’ ಎಂಬ ಪ್ರಿಟೋರಿಯಸ್‌ ಹೇಳಿಕೆಯನ್ನು “ಕ್ರಿಕೆಟ್‌ ಸೌತ್‌ ಆಫ್ರಿಕಾ’ (ಸಿಎಸ್‌ಎ) ಬಿಡುಗಡೆ ಮಾಡಿದೆ.

“ದಕ್ಷಿಣ ಆಫ್ರಿಕಾ ಪರ ಕ್ರಿಕೆಟ್‌ ಆಡುವುದು ನನ್ನ ಬದುಕಿನ ಏಕೈಕ ಗುರಿ ಆಗಿತ್ತು. ಇದು ಎಷ್ಟರ ಮಟ್ಟಿಗೆ ಸಾಧ್ಯವಾದೀತು ಎಂಬುದು ನನಗೆ ಗೊತ್ತಿರಲಿಲ್ಲ. ಆದರೆ ಕಠಿನ ಪರಿಶ್ರಮ ಮತ್ತು ದೇವರ ದಯೆಯಿಂದ ಇದು ಸಾಧ್ಯವಾಯಿತು’ ಎಂದು ಪ್ರಿಟೋರಿಯಸ್‌ ಹೇಳಿದ್ದಾರೆ.

Advertisement

ತನ್ನ ಯಶಸ್ಸಿನ ಹಾದಿಯ ಪಾಲುದಾರರಾದ ಎಲ್ಲರಿಗೂ ಪ್ರಿಟೋರಿಯಸ್‌ ಕೃತಜ್ಞತೆ ಸಲ್ಲಿಸಿದರು. ಮುಖ್ಯವಾಗಿ, ತಂಡದಿಂದ ಕೈಬಿಟ್ಟಾಗ ಮರಳಿ ಸೇರಿಸಿಕೊಂಡ ನಾಯಕ ಫಾ ಡು ಪ್ಲೆಸಿಸ್‌ ಅವರನ್ನು ವಿಶೇಷವಾಗಿ ನೆನೆದರು. ಪ್ರತಿಯಾಗಿ ಸಿಎಸ್‌ಎ ನಿರ್ದೇಶಕ ಎನೋಕ್‌ ಎನ್‌ಕ್ವೆ ಅವರು ಪ್ರಿಟೋರಿಯಸ್‌ ಸಲ್ಲಿಸಿದ ಕ್ರಿಕೆಟ್‌ ಸೇವೆಗೆ ಧನ್ಯವಾದ ಸಲ್ಲಿಸಿದರು.

ಐಪಿಎಲ್‌ನಲ್ಲಿ ಡ್ವೇನ್‌ ಪ್ರಿಟೋರಿಯಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರನಾಗಿದ್ದಾರೆ. ದಿ ಹಂಡ್ರೆಡ್‌ ಸರಣಿಯಲ್ಲಿ ವೆಲ್ಶ್ ಫೈರ್‌, ಸಿಪಿಎಲ್‌ ಮತ್ತು ಎಸ್‌ಎ20 ಲೀಗ್‌ಗಳಲ್ಲಿ ಡರ್ಬನ್‌ ಸೂಪರ್‌ ಜೈಂಟ್ಸ್‌ ಪರ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next