Advertisement

ಚಿನ್ನಸ್ವಾಮಿಗೆ ಸೌರವ್‌ ಗಂಗೂಲಿ ಭೇಟಿ

10:55 PM Oct 30, 2019 | Team Udayavani |

ಬೆಂಗಳೂರು: ಬುಧವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ (ಎನ್‌ಸಿಎ) ಭೇಟಿ ನೀಡಿದ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಎನ್‌ಸಿಎ ಅಧ್ಯಕ್ಷ ರಾಹುಲ್‌ ದ್ರಾವಿಡ್‌ ಜತೆ ಚರ್ಚೆ ನಡೆಸಿದರು. ಎನ್‌ಸಿಎ ಸುಧಾರಣೆ ಕುರಿತಂತೆ ಗಂಗೂಲಿ-ದ್ರಾವಿಡ್‌ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ಸಭೆಯ ಮುಖ್ಯಾಂಶ ಇನ್ನಷ್ಟೇ ಹೊರಬೇಕಿದೆ.

Advertisement

ಎನ್‌ಸಿಎ ಸುಧಾರಣೆಗೆ ಕ್ರಮಕೈಗೊಳ್ಳುವುದೇ ಗಂಗೂಲಿ ಭೇಟಿಯ ಮುಖ್ಯ ಉದ್ದೇಶವಾಗಿತ್ತು. ಸದ್ಯ ಭಾರತದ ಭವಿಷ್ಯದ ಕ್ರಿಕೆಟಿಗರನ್ನು ರೂಪಿಸುವ ಹೊಣೆಹೊತ್ತಿರುವ ದ್ರಾವಿಡ್‌, ಗಂಗೂಲಿಯೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ ಕೆಎಸ್‌ಸಿಎ ಸದಸ್ಯರು, ಗಂಗೂಲಿ ಮತ್ತಿತರ ಬಿಸಿಸಿಐ ನೂತನ ಪದಾಧಿಕಾರಿಗಳಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಅಳವಡಿಸಿರುವ ಸಬ್‌ಏರ್‌ ಒಳಚರಂಡಿ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ, ಖಜಾಂಚಿ ಅರುಣ್‌ ಸಿಂಗ್‌ ಧುಮಾಲ್‌ ಅವರನ್ನು ಕೆಎಸ್‌ಸಿಎಯಿಂದ ಸಮ್ಮಾನಿಸಲಾಯಿತು.

ಕೋಲಾರ ಸಮೀಪ ಕ್ರಿಕೆಟ್‌ ಮೈದಾನಕ್ಕೆ ಜಾಗ
ಭಾರತೀಯ ಕ್ರಿಕೆಟ್‌ ತಂಡ ಅಭ್ಯಾಸ ಪಂದ್ಯಗಳನ್ನಾಡಲು ಕೋಲಾರ ಸಮೀಪ ಜಾಗ ಹುಡುಕುವಂತೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಸೂಚಿಸಿದ್ದಾರೆ ಎಂದು ಜಿಲ್ಲೆಯ ಕೆಸಿಸಿಐ ಸಮನ್ವಯಾಧಿಕಾರಿ ಆಯಿಲ್‌ ರಮೇಶ್‌ ತಿಳಿಸಿದ್ದಾರೆ. ಬೆಂಗಳೂರಿಗೆ ಭೇಟಿ ನೀಡಿದ್ದ ಗಂಗೂಲಿಗೆ, ಕೋಲಾರ ಸಮೀಪ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ಸ್ಥಾಪಿಸಲು ಸರ್ಕಾರ 16 ಎಕರೆ ಜಮೀನನ್ನು ಮಂಜೂರು ಮಾಡಿರುವುದು ಗಮನಕ್ಕೆ ತರಲಾಯಿತು. ಇದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹತ್ತಿರವಾಗಿದೆಯೆಂಬ ಮಾಹಿತಿ ನೀಡಲಾಯಿತು. ಈ ಬಗ್ಗೆ ಆಸಕ್ತಿ ತೋರಿದ ಗಂಗೂಲಿ, ಭಾರತೀಯ ಕ್ರಿಕೆಟ್‌ ತಂಡ ಅಭ್ಯಾಸ ನಡೆಸಲು ವಿಮಾನ ನಿಲ್ದಾಣ ಸಮೀಪ 30 ಎಕರೆ ಜಾಗ ನೀಡಿದರೆ, ಕ್ರೀಡಾಂಗಣ ನಿರ್ಮಾಣ ಮಾಡಲು ಬಿಸಿಸಿಐ ಸಿದ್ಧ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next