ಮುಂಬೈ: ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾ ನಾಯಕತ್ವದಿಂದ ಕೆಳಕ್ಕಿಳಿಯುವಾಗ ಹಲವು ಹೈಡ್ರಾಮಾಗಳು ನಡೆದಿದ್ದವು. ಆಗ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದರು. ಗಂಗೂಲಿ ಮತ್ತು ವಿರಾಟ್ ನಡುವಿನ ವೈಮನಸ್ಸಿನ ಕಾರಣ ವಿರಾಟ್ ಟೆಸ್ಟ್ ನಾಯಕತ್ವ ತೊರೆದಿದ್ದಾರೆ ಎನ್ನಲಾಗಿತ್ತು. ಇದೀಗ ಈ ಬಗ್ಗೆ ಸ್ವತಃ ಸೌರವ್ ಗಂಗೂಲಿ ಮಾತನಾಡಿದ್ದಾರೆ.
ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವ ಸುದ್ದಿಯನ್ನು ಮೊದಲು ಕೇಳಿದಾಗ ಎಲ್ಲರಂತೆ ಆಶ್ಚರ್ಯವಾಗಿತ್ತು ಎಂದು ಮಾಜಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಬಹಿರಂಗಪಡಿಸಿದ್ದಾರೆ.
ಅಲ್ಲದೆ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯಲು ವಿರಾಟ್ ಕೊಹ್ಲಿಗೆ ತಿಳಿಸಿರಲಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಕ್ಕಿಳಿದಾಗ ಬಿಸಿಸಿಐ ಅದಕ್ಕೆ ಸಿದ್ದವಾಗಿತ್ತೆ ಎಂದು ಕೇಳಿದ ಪ್ರಶ್ನೆಗೆ ಗಂಗೂಲಿ ಉತ್ತರಿಸಿದ್ದು, ‘ಇಲ್ಲ, ದಕ್ಷಿಣ ಆಫ್ರಿಕಾ ಸರಣಿ ಮುಗಿದಾಗಂತೂ ಸಿದ್ದವೇ ಇರಲಿಲ್ಲ. ಅವರು (ಕೊಹ್ಲಿ) ಯಾಕೆ ಹಾಗೆ ಮಾಡಿದರು ಎಂದು ಗೊತ್ತಿಲ್ಲ. ಅವರೇ ಹೇಳಬೇಕು. ವಿರಾಟ್ ತ್ಯಜಿಸಿದ ಬಳಿಕ ಆ ಸಮಯದಲ್ಲಿ ರೋಹಿತ್ ಶರ್ಮಾ ಅವರೇ ನಮಗೆ ಉತ್ತಮ ಆಯ್ಕೆ ಆಗಿತ್ತು’ ಎಂದು ಹೇಳಿದರು.
ಇದನ್ನೂ ಓದಿ:Jammu And Kashmir 5.4 ತೀವ್ರತೆಯ ಭೂಕಂಪ, ದೆಹಲಿಯಲ್ಲಿ ಕಂಪನದ ಅನುಭವ
“ಕೊಹ್ಲಿ ಉತ್ತಮ ನಾಯಕರಾಗಿದ್ದರು, ಕೊಹ್ಲಿ ಮತ್ತು ಶಾಸ್ತ್ರಿ ಅಡಿಯಲ್ಲಿ ಭಾರತ ನಿಜವಾಗಿಯೂ ಉತ್ತಮವಾಗಿ ಪ್ರದರ್ಶನ ನೀಡಿತ್ತು. ಭಾರತವು ನಿರ್ಭೀತ ಮನೋಭಾವದಿಂದ ಆಡಿತ್ತು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಅದೇ ಮನೋಭಾವವನ್ನು ತೋರಿಸಿತು. ಅವರು ಆ ಸಮಯದಲ್ಲೇ ಅವರು ಮ್ಯಾಂಚೆಸ್ಟರ್ ಟೆಸ್ಟ್ (ಇಂಗ್ಲೆಂಡ್ ಸರಣಿಯ ಕೊನೆಯ ಪಂದ್ಯ) ಆಡಿದ್ದರೆ, ಅವರು ಸರಣಿಯನ್ನು ಗೆಲ್ಲುತ್ತಿದ್ದರು” ಎಂದು ಗಂಗೂಲಿ ಹೇಳಿದರು.