ಹೊಸದಿಲ್ಲಿ: ತನ್ನ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳಿಗೆ ಟೀಮ್ ಇಂಡಿಯಾದ ಕೋಚ್ ರವಿಶಾಸ್ತ್ರಿ ಕಿಡಿಕಿಡಿಯಾಗಿದ್ದಾರೆ. ಅದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.
“ಸತತವಾಗಿ ಹಾಗೇನಿಲ್ಲ ಎಂದು ನಾನು ಸ್ಪಷ್ಟಪಡಿಸಿದ್ದರೂ, ಮತ್ತೆ ಮತ್ತೆ ಅದನ್ನೇ ಹೇಳುತ್ತಿರುವವರು ಏನಾದರೂ ಹೇಳಿಕೊಂಡಿರಲಿ, ಅದು ಅವರ ಹಣೆಬರೆಹ’ ಎಂದು ಹೇಳಿದ್ದಾರೆ.
ಒಂದು ವಾರದ ಹಿಂದೆ ಸ್ವತಃ ಸೌರವ್ ಗಂಗೂಲಿ ಕೂಡ ತಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಸಾಮಾಜಿಕ ತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ, ಬಿರುಕಿನ ಕುರಿತ ವರದಿಗಳು ಬರುತ್ತಲೇ ಇದೆ. ಇದು ರವಿಶಾಸ್ತ್ರಿಯನ್ನು ಕೆರಳಿಸಿದೆ. ಒಂದು ವಾರದ ಹಿಂದಷ್ಟೇ ರವಿಶಾಸ್ತ್ರಿ, ತಾನು ಗಂಗೂಲಿಯ ಕ್ರಿಕೆಟ್ ಸಾಧನೆಯನ್ನು ಬಹಳ ಗೌರವಿಸುತ್ತೇನೆ. ಅವರು ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ತನಗೆ ಖುಷಿಯಾಗಿದೆ ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
2016ರಲ್ಲಿ ಭಿನ್ನಮತ
2016ರಲ್ಲಿ ಭಾರತ ಕ್ರಿಕೆಟ್ ತಂಡದ ತರಬೇತುದಾರರನ್ನು ಆಯ್ಕೆ ಮಾಡುವ ವೇಳೆ ರವಿಶಾಸ್ತ್ರಿ ಮತ್ತು ಗಂಗೂಲಿ ನಡುವೆ ಭಿನ್ನಮತ ಶುರುವಾಗಿತ್ತು. ಆಗ ಗಂಗೂಲಿ ನೇತೃತ್ವದ ಸಮಿತಿ ರವಿಶಾಸ್ತ್ರಿ ಬದಲು ಅನಿಲ್ ಕುಂಬ್ಳೆಯನ್ನು ಆಯ್ಕೆ ಮಾಡಿತ್ತು. ಆ ವೇಳೆ ರವಿಶಾಸ್ತ್ರಿ ಬಹಿರಂಗವಾಗಿಯೇ ಗಂಗೂಲಿಯನ್ನು ಟೀಕಿಸಿದ್ದರು.