Advertisement

ದೇವನಹಳ್ಳಿ ರೈತರಿಗೆ ಹುಳಿಯಾದ ದ್ರಾಕ್ಷಿ; ಹೊರರಾಜ್ಯಗಳ ರಫ್ತಿಗೆ ಹಿಂದೇಟು

06:14 PM Apr 28, 2022 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಯಲುಸೀಮೆ ಪ್ರದೇಶವಾಗಿದ್ದು, ಇರುವ ಅಲ್ಪಸ್ವಲ್ಪದ ನೀರಿನಲ್ಲಿಯೇ ದ್ರಾಕ್ಷಿ ಹಾಗೂ ಇತರೆ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ದ್ರಾಕ್ಷಿ ಉತ್ತಮ ಫ‌ಸಲು ಬಂದಿದೆ. ಆದರೂ, ರೈತರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದೆ ಅನ್ನದಾತರು ಕಂಗಾಲು ಆಗಿದ್ದಾರೆ.

Advertisement

ಕಳೆದ ಎರಡು ವರ್ಷಗಳಿಂದ ಕೋವಿಡ್‌ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿತ್ತು. ಕೊರೊನಾ ಸಮಯದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಇಳುವರಿ ಬಂದಿದ್ದರೂ, ಲಾಕ್‌ಡೌನ್‌ ಪರಿಣಾಮದಿಂದ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ. ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದರು. ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟ ಉಂಟಾಗಿತ್ತು. ಇದೀಗ ಒಳ್ಳೆಯ ಇಳುವರಿ ಬಂದರೂ, ಬೆಲೆಯಿಲ್ಲ ಹಾಕಿದ ಬಂಡವಾಳವು ಸಿಗದ ಸ್ಥಿತಿ ನಿರ್ಮಾಣವಾಗಿದೆ.

ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿ ಹಾಗೂ ಚನ್ನರಾಯಪಟ್ಟಣ ಹೋಬಳಿಗಳಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯುತ್ತಾರೆ. ಕುಂದಾಣ ಮತ್ತು ಕಸಬಾ ಹೋಬಳಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಬಯಲುಸೀಮೆ ಪ್ರದೇಶವಾಗಿದ್ದು, ಯಾವುದೇ ನದಿಮೂಲ, ಡ್ಯಾಂ, ಕಾಲುವೆಗಳು ಇಲ್ಲದಿದ್ದರೂ ಇರುವ ಕೊಳವೆಬಾವಿಗಳಲ್ಲೇ ನೀರನ್ನು ಹಾಯಿಸಿ ದ್ರಾಕ್ಷಿ ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ.

ಹೊರರಾಜ್ಯ ರಫ್ತಿಗೆ ಹಿಂದೇಟು: ದ್ರಾಕ್ಷಿಯಲ್ಲಿ ದಿಲ್‌ ಕುಶ್‌, ಬೆಂಗಳೂರು ಬ್ಲೂ, ಶರತ್‌, ರೆಡ್‌ಗ್ಲೋಬ್‌, ವೈಟ್‌ ಶೀಡ್‌ಲೆಸ್‌, ಇತರೆ ದ್ರಾಕ್ಷಿಯ ಬೆಳೆಗಳಾಗಿದೆ. ದಿಲ್‌ಕುಶ್‌ ಕೆ.ಜಿ.ಗೆ 20 ರೂ. ಬೆಲೆ, ಬೆಂಗಳೂರು ಬ್ಲೂಗೆ 22 ರೂ.ಗೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಬೆಳೆದಿರುವ ದ್ರಾಕ್ಷಿಯನ್ನು ಹೊರರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರ, ಉತ್ತಪ್ರದೇಶ, ಕೊಲ್ಕತ್ತಾ, ದೆಹಲಿ, ಸಾಂಗ್ಲಿ, ಮುಂಬೈಗಳಿಗೆ ರಫ್ತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಡೀಸೆಲ್‌, ಪೆಟ್ರೋಲ್‌ ಬೆಲೆ ಏರಿಕೆ,
ಟೋಲ್‌ ದರ ಏರಿಕೆ ಮೊದಲಾದ ಖರ್ಚುಗಳಿಂದ ಹೊರರಾಜ್ಯಗಳಿಗೆ ರಫ್ತು ಮಾಡಿಕೊಳ್ಳಲು ಹಿಂದೇಟು ಹಾಕುವಂತಾಗಿದೆ.

ದ್ರಾಕ್ಷಿ ಬೆಲೆ ಇಳಿಮುಖ: ಮೊದಲು ಕೆ.ಜಿ.ಗೆ 30ರಿಂದ 35ರೂ. ಬೆಲೆ ಇತ್ತು. ಇದೀಗ 18 ರಿಂದ 20ರೂ.ಗೆ ಇಳಿಮುಖವಾಗಿದ್ದು, ಇದರಿಂದ ರೈತರಿಗೆ ದ್ರಾಕ್ಷಿ ಇಳುವರಿಯಿದ್ದರೂ, ಸೂಕ್ತ ಬೆಲೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದುಬಾರಿ ಬೆಲೆ ಏರಿಕೆ ಆಗುತ್ತಿರುವುದರಿಂದ ರೈತರು ಎಷ್ಟೇ ಬೆಳೆದರೂ, ಸರಬರಾಜು ಮಾಡುವ ಖರ್ಚು ಹಾಗೂ ಕೂಲಿಗಾರರಿಗೆ ತಗಲುವ ಖರ್ಚು ಬರುವುದಿಲ್ಲ. ರೈತರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಿದರೆ ಅನುಕೂಲವಾಗುತ್ತದೆ ಎಂದು ರೈತರು ಹೇಳುತ್ತಾರೆ.

Advertisement

ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ರೈತರಿಗೆ ಅನುಕೂಲ ದೇವನಹಳ್ಳಿ ತಾಲೂಕಿನಲ್ಲಿ ದ್ರಾಕ್ಷಿಯನ್ನು ಅತಿ ಹೆಚ್ಚು ಬೆಳೆ‌ಯುತ್ತಾರೆ. ಇದರ ಜೊತೆಗೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲೂ ದ್ರಾಕ್ಷಿ ಬೆಳೆಯುವ ರೈತರಿದ್ದಾರೆ. ಆದರೆ, ರೈತರಿಗೆ ಸರ್ಕಾರ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದಲ್ಲಿ ಹಾಗೂ ದ್ರಾಕ್ಷಿ ಹಣ್ಣಿನ ರಸ ತಯಾರಿಕಾ ಘಟಕ ಪ್ರಾರಂಭ ಮಾಡಿದರೆ ರೈತರಿಗೆ ಅನುಕೂಲವಾಗಲಿದ್ದು, ದ್ರಾಕ್ಷಿ ಬೆಳೆಯಲು ರೈತರು ಆಸಕ್ತಿ ತೋರಲು ಸಾಧ್ಯವಾಗುತ್ತದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ದೇವನಹಳ್ಳಿಯಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯುತ್ತಾರೆ. ದ್ರಾಕ್ಷಿ ಉತ್ತಮ ಇಳುವರಿ ಬಂದಿದೆ. ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಉತ್ತಮ ಮಾರ್ಗದರ್ಶನ ನೀಡಲಾಗುತ್ತಿದೆ. ಹನಿ ನೀರಾವರಿಗೆ ಸಹಾಯಧನ ನೀಡಲಾಗುತ್ತಿದೆ. ವಿವಿಧ ತಳಿಯ ದ್ರಾಕ್ಷಿ ಬೆಳೆಯುತ್ತಾರೆ. ಹೊಸದಾಗಿ ದ್ರಾಕ್ಷಿ ತೋಟ ಮಾಡುವವರಿಗೆ ನರೇಗಾ ಯೋಜನೆಯಲ್ಲಿ ಜಾಬ್‌ ಕಾರ್ಡ್‌ ಹೊಂದಿದ ಫ‌ಲಾನುಭವಿಗೆ ಸಹಾಯಧನ ನೀಡಲಾಗುವುದು.
ಗುಣವಂತ, ಉಪನಿರ್ದೇಶಕ,
ಜಿಲ್ಲಾ ತೋಟಗಾರಿಕಾ ಇಲಾಖೆ

ದ್ರಾಕ್ಷಿ ಬೆಳೆಯನ್ನು ಬೆಳೆದುಕೊಂಡು ಬಂದಿದ್ದೇವೆ. ಕಳೆದ ಎರಡು ವರ್ಷ ಕೊರೊನಾದಿಂದ ನಷ್ಟ ಮಾಡಿಕೊಂಡಿದ್ದೇವೆ. ದ್ರಾಕ್ಷಿ ಬೆಳೆಗೆ ಬೆಲೆ ಇಲ್ಲದೆ ಕಂಗಾಲು ಆಗಿದ್ದೇವೆ. ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಸರ್ಕಾರ ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಉತ್ತಮ ಇಳುವರಿ ಬಂದರೂ ದ್ರಾಕ್ಷಿಗೆ ಬೆಲೆ ಇಲ್ಲದಂತಾಗಿದೆ.
ಎ. ಸಿ. ನಾಗರಾಜ್‌,
ದ್ರಾಕ್ಷಿ ಬೆಳೆಗಾರರು, ಆವತಿ

Advertisement

Udayavani is now on Telegram. Click here to join our channel and stay updated with the latest news.

Next