Advertisement

ಸೂಪ್‌ ಸೂಪರ್‌

10:33 AM Aug 02, 2017 | Team Udayavani |

ಜಿಟಿ ಜಿಟಿ ಮಳೆ ಬೀಳುವಾಗ ಬಿಸಿ ಬಿಸಿಯಾದ ಸೂಪ್‌ ಕುಡಿಯುವುದು ಅಂದರೆ, ಅದು ಖುಷ್‌ ಖುಷಿಯಾಗಿ “ವಾಹ್‌ ವಾಹ್‌ ವಾಹ್‌’ ಎನ್ನುತ್ತಾ ಬಾಯಿ ಚಪ್ಪರಿಸುವಂಥ ಸಂದರ್ಭ. ಇಂಥ ಸುಮಧುರ ಕ್ಷಣಗಳು ಯಾರಿಗೆ ತಾನೇ ಇಷ್ಟವಿಲ್ಲ? ಬಾಯಿಗೆ ರುಚಿ, ದೇಹಕ್ಕೆ ಆರೋಗ್ಯ ನೀಡುವ ಬಗೆಬಗೆಯ ಸೂಪ್‌ ರೆಸಿಪಿಗಳ ಪರಿಚಯ ಇಲ್ಲಿದೆ…

Advertisement

1. ಓಟ್ಸ್‌ ಸೂಪ್‌
ಬೇಕಾಗುವ ಸಾಮಗ್ರಿ: ಓಟ್ಸ್‌- 3 ಚಮಚ, ಹಾಲು- 1 ಕಪ್‌, ಈರುಳ್ಳಿ- 1, ಪೆಪ್ಪರ್‌ ಪೌಡರ್‌- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- 1 ಚಮಚ.

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ. ಸ್ವಲ್ಪ ಕಾದ ಮೇಲೆ ಅದಕ್ಕೆ, ಹೆಚ್ಚಿಕೊಂಡ ಈರುಳ್ಳಿಯನ್ನು ಹಾಕಿ ಹುರಿಯಿರಿ, ಬೇರೆ ಪಾತ್ರೆಯಲ್ಲಿ ಓಟ್ಸ್‌ ಅನ್ನು 1 ಕಪ್‌ ನೀರು ಹಾಕಿ ಬೇಯಿಸಿಕೊಳ್ಳಿ, ಇದಕ್ಕೆ ಹಾಲು ಹಾಕಿ ಕುದಿಸಿ. ನಂತರ ಇದಕ್ಕೆ ಹುರಿದುಕೊಂಡ ಈರುಳ್ಳಿ ಹಾಕಿ, ಪೆಪ್ಪರ್‌ ಪೌಡರ್‌, ಸಾಲ್ಟ್ ಹಾಕಿ ಬಿಸಿಯಿರುವಾಗಲೇ ಸವಿಯಿರಿ. 

2. ಕ್ಯಾರೆಟ್‌ ಸೂಪ್‌
ಬೇಕಾಗುವ ಸಾಮಗ್ರಿ: ಕ್ಯಾರೆಟ್‌ (ಹೆಚ್ಚಿಕೊಂಡಿದ್ದು)- 1 ಕಪ್‌, ಶುಂಠಿ- 1 ತುಂಡು, ಈರುಳ್ಳಿ- 1, ಎಣ್ಣೆ- 1 ಚಮಚ, ಪೆಪ್ಪರ್‌ ಪೌಡರ್‌, ಉಪ್ಪು- ರುಚಿಗೆ ತಕ್ಕಷ್ಟು. 

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಒಂದು ಸ್ಪೂನ್‌ ಎಣ್ಣೆ ಹಾಕಿ ಈರುಳ್ಳಿ ಹುರಿಯಿರಿ. ಇದಕ್ಕೆ ಹೆಚ್ಚಿಕೊಂಡ ಕ್ಯಾರೆಟ್‌ ಮತ್ತು ಶುಂಠಿಯನ್ನು ಹಾಕಿ, ಉಪ್ಪು ಬೆರೆಸಿ, 2 ವಿಷಲ್‌ ಕೂಗಿಸಿ. ಇದು ಆರಿದ ನಂತರ, ಮಿಕ್ಸಿಯಲ್ಲಿ ನುಣ್ಣಗೆ ಬ್ಲೆಂಡ್‌ ಮಾಡಿಕೊಳ್ಳಿ. ಅರ್ಧ ಕಪ್‌ ನೀರು ಸೇರಿಸಿ, ಪೆಪ್ಪರ್‌ ಪೌಡರ್‌ ಹಾಕಿ ಬಿಸಿ ಇರುವಾಗಲೇ ಕುಡಿಯಿರಿ.

Advertisement

3. ಸ್ವೀಟ್‌ ಕಾರ್ನ್ ಸೂಪ್‌
ಬೇಕಾಗುವ ಸಾಮಗ್ರಿ: ಸ್ವೀಟ್‌ ಕಾರ್ನ್- 1 ಕಪ್‌, ಕ್ಯಾರೆಟ್‌-ಅರ್ಧ ಕಪ್‌, ಸಣ್ಣದಾಗಿ ಹೆಚ್ಚಿಕೊಂಡ ಹುರುಳಿಕಾಯಿ- ಅರ್ಧ ಕಪ್‌, ಕಾರ್ನ್ಫ್ಲೋರ್‌ 2 ಚಮಚ, ಪೆಪ್ಪರ್‌ ಪೌಡರ್‌, ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪ.

ಮಾಡುವ ವಿಧಾನ: ಮೊದಲು ಅರ್ಧ ಕಪ್‌ ಕಾರ್ನ್ ಅನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಹೆಚ್ಚಿಕೊಂಡ ಹುರುಳಿಕಾಯಿ, ಕ್ಯಾರೆಟ್‌ ಜೊತೆಗೆ ಕಾರ್ನ್ ಪೇಸ್ಟ್‌ ಸೇರಿಸಿ ನೀರು ಹಾಕಿ, ಹತ್ತು ನಿಮಿಷ ಬೇಯಿಸಿ. ಇದಕ್ಕೆ ಕಾರ್ನ್ಫ್ಲೋರ್‌ ಹಾಕಿ ಕಲಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ನಂತರ ಪೆಪ್ಪರ್‌ ಪೌಡರ್‌ ಬೆರೆಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಯಾಗಿ ಸರ್ವ್‌ ಮಾಡಿ. 

4. ಕ್ರೀಮೀ ಟೊಮೇಟೊ ಸೂಪ್‌
ಬೇಕಾಗುವ ಸಾಮಗ್ರಿ: ಟೊಮೇಟೊ- 3, ಈರುಳ್ಳಿ- 1, ಬೆಣ್ಣೆ- 2 ಚಮಚ, ಫ್ರೆಶ್‌ ಕ್ರೀಂ- 100 ಮಿ.ಲೀ., ಮೈದಾ- 1 ಚಮಚ, ಪೆಪ್ಪರ್‌ ಪೌಡರ್‌ ಮತ್ತು ಉಪ್ಪು ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಬೆಣ್ಣೆ ಹಾಕಿ, ಈರುಳ್ಳಿಯನ್ನು ಹುರಿಯಿರಿ. ಇದಕ್ಕೆ ಹೆಚ್ಚಿದ ಟೊಮೇಟೊ, ಉಪ್ಪು, ನೀರು ಹಾಕಿ ಒಂದು ವಿಷಲ್‌ ಕೂಗಿಸಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಬ್ಲೆಂಡ್‌ ಮಾಡಿಕೊಳ್ಳಿ. ಬಾಣಲೆಯಲ್ಲಿ ಬೆಣ್ಣೆಯನ್ನು ಕರಗಿಸಿ ಇದಕ್ಕೆ ಮೈದಾ ಹಿಟ್ಟು ಸೇರಿಸಿ ಕಲಸಿ. ಈಗ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ, ಕಲಸುತ್ತಿರಬೇಕು. ನಂತರ ಅದಕ್ಕೆ ಪೆಪ್ಪರ್‌ ಪೌಡರ್‌ ಹಾಕಿ, ಫ್ರೆಷ್‌ ಕ್ರೀಂ ಹಾಕಿ ಸರ್ವ್‌ ಮಾಡಿ. 

ಶ್ರುತಿ ಕೆ.ಎಸ್‌., ತುರುವೇಕೆರೆ

Advertisement

Udayavani is now on Telegram. Click here to join our channel and stay updated with the latest news.

Next