Advertisement

ಅಜಾತಶತ್ರುವಿಗೆ ವಿವಿಧೆಡೆ ಭಾವಪೂರ್ಣ ಶ್ರದ್ಧಾಂಜಲಿ

03:09 PM Nov 26, 2018 | Team Udayavani |

ದಾವಣಗೆರೆ: ಕನ್ನಡ ಚಲನಚಿತ್ರ ರಂಗದ ಹಿರಿಯ ನಟ, ಅಜಾತಶತ್ರು, ಕಲಿಯುಗದ ಕರ್ಣ, ರೆಬೆಲ್‌ಸ್ಟಾರ್‌.. ಎಂದೇ ಖ್ಯಾತಿವೆತ್ತಿದ್ದ ಮಾಜಿ ಸಚಿವ ಅಂಬರೀಷ್‌ ಅವರಿಗೆ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಮಾಜಿ ಸಚಿವ ಅಂಬರೀಷ್‌ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ, ಕನ್ನಡ ಪರ ಸಂಘ-ಸಂಸ್ಥೆಗಳು, ಪತ್ರಕರ್ತರ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಮುಂದೂಡಲ್ಪಟ್ಟಿತು. ಸಂಸದ ಜಿ.ಎಂ. ಸಿದ್ದೇಶ್ವರ್‌ ರಿಂಗ್‌ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಜಲಸಿರಿ… ಯೋಜನೆ ಕಾಮಗಾರಿ ಶಂಕುಸ್ಥಾಪನೆಯೂ ಮುಂದೂಲ್ಪಟ್ಟಿತು. 

ದಾವಣಗೆರೆಯ ಜಯದೇವ ವೃತ್ತ, ಮಹಾತ್ಮಗಾಂಧಿ ವೃತ್ತ ಒಳಗೊಂಡಂತೆ ಅನೇಕ ಭಾಗದಲ್ಲಿ ಅಂಬರೀಷ್‌ರವರ ಭಾವಚಿತ್ರವಿರಿಸಿ, ಮಾಲಾರ್ಪಣೆ, ಪುಷ್ಪಾರ್ಚನೆಯ ಮೂಲಕ ಅಗಲಿದ ನೆಚ್ಚಿನ ನಾಯಕನ ಸ್ಮರಿಸಲಾಯಿತು. ದಾವಣಗೆರೆಯ ಎಲ್ಲಾ ಚಿತ್ರಮಂದಿರಗಳು ಪ್ರದರ್ಶನ ರದ್ದುಪಡಿಸುವ ಮೂಲಕ 208ಕ್ಕೂ ಹೆಚ್ಚು ಚಿತ್ರಗಳ ಮೂಲಕ ಕನ್ನಡ ಮಾತ್ರವಲ್ಲ ಎಲ್ಲ ಭಾಷಿಕರ ಮನಸೂರೆಗೊಂಡಿದ್ದ ಅಂಬರೀಷ್‌ ರವರಿಗೆ ಗೌರವ ಸಲ್ಲಿಸಿದವು.

ಮಹಾತ್ಮಗಾಂಧಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಮತ್ತು ದಾವಣಗೆರೆ ಚಿತ್ರಮಂದಿರ ಮಾಲೀಕರ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ. ನಾರಾಯಣಗೌಡ ಬಣ) ಜಿಲ್ಲಾ ಅಧ್ಯಕ ಎಂ.ಎಸ್‌. ರಾಮೇಗೌಡ, ಅಂಬರೀಷ್‌ ಕನ್ನಡ ಚಲನಚಿತ್ರ ರಂಗದ ಮೇರು ಹಿರಿಯ ನಟ. ಅಜಾತಶತ್ರು.
 
ಕನ್ನಡದ ಚಿತ್ರರಂಗದ ಹಿರಿಯಣ್ಣನಂತಿದ್ದ ಅವರಲ್ಲಿ ಚಿತ್ರೋದ್ಯಮ, ಕಲಾವಿದರ ಸಮಸ್ಯೆಗೆ ಸಮರ್ಥ ಉತ್ತರ ಇರುತಿತ್ತು. ಅಂಬರೀಷ್‌ರವರ ಅಕಾಲಿಕ ನಿಧನದಿಂದ ಕನ್ನಡ ಚಲನಚಿತ್ರ ರಂಗ ಅಕ್ಷರಶಃ ಅನಾಥವಾಗಿದೆ ಎಂದು ಸ್ಮರಿಸಿದರು.

ಚಲನಚಿತ್ರ ರಂಗದ ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದ್ದರು. ಮಂಡ್ಯದ ಗಂಡು ಎಂದೇ ಕರೆಯಲ್ಪಡುತ್ತಿದ್ದ ಅವರು ರಾಜ್ಯದ ಎಲ್ಲ ಭಾಗದವರಿಗೆ ಸ್ಪಂದಿಸುತ್ತಿದ್ದರು. ಅನೇಕರಿಗೆ ಅನೇಕ ರೀತಿಯ ಸಹಾಯ ಮಾಡುವ ಮೂಲಕ ನಿಜ ಜೀವನದಲ್ಲೂ ಕಲಿಯುಗದ ಕರ್ಣನಂತಿದ್ದರು. ಅಂತಹ ಮಹಾನ್‌ ಕಲಾವಿದ, ವ್ಯಕ್ತಿಗೆ ಸ್ಮಾರಕ ನಿರ್ಮಾಣದ ಮೂಲಕ ಗೌರವ ಸಲ್ಲಿಸಬೇಕು. ರಾಜ್ಯ ಸರ್ಕಾರ ಅಂಬರೀಷ್‌ರವರ ಸ್ಮಾರಕವನ್ನು ಬೆಂಗಳೂರಿನಲ್ಲೇ ಮಾಡಬೇಕು ಎಂದು ಮನವಿ ಮಾಡಿದರು.

Advertisement

ಪುಷ್ಪಾಂಜಲಿ ಚಿತ್ರಮಂದಿರದ ವ್ಯವಸ್ಥಾಪಕ ಅರುಣ್‌ ಮಾತನಾಡಿ, ಅಂಬರೀಷ್‌ರವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. 208 ಚಿತ್ರಗಳಲ್ಲಿ ನಟಿಸಿರುವ ಮಹಾನ್‌ ನಟನ ಗೌರವಾರ್ಥ ದಾವಣಗೆರೆಯಲ್ಲಿ ಎಲ್ಲಾ ಚಿತ್ರಮಂದಿರಗಳ ಪ್ರದರ್ಶನ ರದ್ದುಪಡಿಸಲಾಗಿದೆ. ಅಂಬರೀಷ್‌ ಮತ್ತೂಮ್ಮೆ ಹುಟ್ಟಿ ಬರಲಿ ಎಂದರು.

ಕಾಂಗ್ರೆಸ್‌ ಮುಖಂಡ ನಲ್ಕುಂದ ಹಾಲೇಶ್‌ ಮಾತನಾಡಿ, ಅಂಬರೀಷ್‌ ಬಹು ದೊಡ್ಡ ನಟರಾಗಿದ್ದರೂ ಒಳ್ಳೆಯ ಸ್ನೇಹಜೀವಿ. ಗೆಳೆತನಕ್ಕೆ ಬಹಳ ಗೌರವ ಕೊಡುತ್ತಿದ್ದರು. ಶನಿವಾರ ಸಂಜೆಯವರೆಗೆ ಇದ್ದಂತಹ ವ್ಯಕ್ತಿ ರಾತ್ರಿ ಆಗುವುದರೊಳಗೆ ಇಲ್ಲ ಎನ್ನುವುದನ್ನ ಅರಗಿಸಿಕೊಳ್ಳಲಿಕ್ಕೂ ಆಗುವುದಿಲ್ಲ. ಅವರಂತಹ ಮಹಾನ್‌ ನಟನ ನಿಧನದಿಂದ ರಾಜ್ಯಕ್ಕೆ, ಚಿತ್ರರಂಗಕ್ಕೆ ಬಹಳ ದೊಡ್ಡ ನಷ್ಟವಾಗಿದೆ ಎಂದು ಸ್ಮರಿಸಿದರು. 

ಮೋತಿ ಚಿತ್ರಮಂದಿರದ ವೀರೇಶ್‌, ವಸಂತ ಚಿತ್ರಮಂದಿರದ ವಿರುಪಾಕ್ಷ, ವೇದಿಕೆಯ ಕೆ.ಜಿ. ಬಸವರಾಜ್‌, ವಿಜಯೇಂದ್ರ, ಶ್ರೀನಿವಾಸ್‌, ಹನುಮಂತಪ್ಪ, ಲೋಕೇಶ್‌, ಬಸಮ್ಮ, ಶಾಂತಮ್ಮ, ಮಂಜುಳಮ್ಮ, ರೇಖಾ ಇತರರು ಇದ್ದರು. ಅಂಬರೀಶಣ್ಣ ಮತ್ತೂಮ್ಮೆ ಹುಟ್ಟಿ ಬಾ… ಎನ್ನುವ ಘೋಷಣೆಯ ಮೂಲಕ ಗೌರವ ಸಲ್ಲಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next