ಶಿವಮೊಗ್ಗ: ದೇವರನ್ನು ಸದಾ ನೆನೆಯುವುದು ಧ್ಯಾನ. ಪೂಜೆ ಮತ್ತು ಓದಿಗೆ ಏಕಾಗ್ರತೆ ಬೇಕು. ಏಕಾಗ್ರತೆಯಿಂದ ಪೂಜೆ ಮಾಡುವವ ಓದಿನಲ್ಲೂ ಜಾಣನಿರುತ್ತಾನೆ ಎಂದು ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ತಿಳಿಸಿದರು. ಶನಿವಾರ ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವೈದಿಕ ಪರಿಷತ್ ವತಿಯಿಂದ ಲೋಕ ಕಲ್ಯಾಣಾರ್ಥಕ್ಕಾಗಿ ಹಮ್ಮಿಕೊಂಡಿದ್ದ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ದುರ್ಬಲ ಮನಸ್ಸಿನಿಂದ ಏನೂ ಸಾಧ್ಯವಿಲ್ಲ. ಏಕಾಗ್ರತೆಯಿಂದ ದೇವರನ್ನು ನೆನೆಯುವುದು ಧ್ಯಾನವಾದರೆ, ಹೊರಗೆ ಹೋಗುತ್ತಿರುವ ಮನಸ್ಸು ಎಳೆದು ತರುವುದು ಪ್ರತ್ಯಾಹಾರ. ಹೊರಗೆ ಹೋದರೆ ಅದು ಕಾಟಾಚಾರ. ಸಂಸ್ಕಾರ ಮತ್ತು ಸಂಸ್ಕೃತಿಯಲ್ಲಿ ಭಾರತ ಎನ್ನುವುದು ಪ್ರಪಂಚಕ್ಕೆ ಮಾದರಿಯಾಗಿದೆ. ಭಾರತವಿದ್ದರೆ ಮಾತ್ರ ಜಗತ್ತು ಉಳಿಯುತ್ತದೆ ಎಂಬುದನ್ನು ಪ್ರಪಂಚದ ಎಲ್ಲಾ ರಾಷ್ಟ್ರಗಳು ತಿಳಿದಿವೆ. ಇಡೀ ಜಗತ್ತಿನಲ್ಲಿ ನಮ್ಮಲ್ಲಿನ ಪ್ರತಿಭಾವಂತ ವೈದ್ಯರು, ವಿಜ್ಞಾನಿಗಳು, ದಿಗ್ಗಜರು ಇದ್ದಾರೆ. ಆದರೆ ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನ ತನ್ನ ಇಡೀ ಶಕ್ತಿಯನ್ನು ಶಸ್ತ್ರಾಸ್ತ್ರ
ಖರೀದಿ ಮಾಡಿ ಸಾಯಿಸಿದರೇ ಸ್ವರ್ಗ ಎನ್ನುವ ತತ್ವದಲ್ಲಿದೆ. ಆದರೆ ಭಾರತ ಇನ್ನೊಬ್ಬರಿಗೆ ಅನ್ನ ನೀಡಿ ಎಲ್ಲರೂ ಸುಖವಾಗಿರಬೇಕು ಎನ್ನುವ ಸಿದ್ಧಾಂತದಲ್ಲಿದೆ ಎಂದರು.
ಕೇವಲ ದುಡ್ಡಿದ್ದರೆ ಮಾತ್ರ ನೆಮ್ಮದಿ ಎಂದು ತಿಳಿದುಕೊಂಡಿದ್ದಾರೆ. ದುಡ್ಡಿನಿಂದ ನೆಮ್ಮದಿ ಸಿಗುವುದಿಲ್ಲ. ಹಿಂದುತ್ವ ಎಂದರೆ ಉಪನಿಷತ್ತಿನ ಭೋರ್ಗರೆತ. ಸಹಸ್ರಾರು ವರ್ಷಗಳಿಂದ ನಮ್ಮ ಋಷಿಮುನಿಗಳ ತಪಸ್ಸಿನಿಂದ ಭಗವಂತನನ್ನು ಕಂಡು ಅವರ ಬಾಯಿಯಿಂದ ತನ್ನಿಂದ ತಾನೇ ಬಂದದ್ದು ವೇದ ಮತ್ತು ಮಂತ್ರಗಳು. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಿ ರಾಮನ ಕುಂಭಾಭಿಷೇಕ ನೋಡುವ ಆಸೆ ಎಲ್ಲ ಭಾರತೀಯರಿಗಿದ್ದು ರಾಮನಾಮಕ್ಕೆ ವಿಶಿಷ್ಟ ಮಹತ್ವವಿದೆ. ರಾಮನಿದ್ದೆಡೆ ವಿಕೃತ ಕಾಮವಿಲ್ಲ ಎಂದರು.
ವೈದಿಕ ಪರಿಷತ್ತಿನ ಪ್ರಮುಖರಾದ ಬಾ.ರಾ. ಜಗದೀಶ್ ಆಚಾರ್ಯ, ಶಂಕರಾನಂದ ಜೋಯ್ಸ, ಎಸ್. ದತ್ತಾತ್ರಿ, ದೀನದಯಾಳು, ಸುರೇಶ್ ಬಾಳೆಗುಂಡಿ, ನಟರಾಜ್ ಭಾಗವತ್ ಇತರರಿದ್ದರು.