Advertisement

ಕುರ್ಚಿ ಬಿಡದ ಸೌಭಾಗ್ಯ ಕಾಂಗ್ರೆಸ್‌ನಿಂದಲೇ ಔಟ್‌

07:10 AM Nov 30, 2017 | |

ಚಿತ್ರದುರ್ಗ: ಇಲ್ಲಿನ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಕುರ್ಚಿ ವಿವಾದ ಹೊಸ ತಿರುವು ಪಡೆದಿದೆ. ಒಡಂಬಡಿಕೆಯಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದೆ ಪಕ್ಷದ ವರಿಷ್ಠರ ಮಾತು ಧಿಕ್ಕರಿಸಿದ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅವರನ್ನು ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಲಾಗಿದೆ.

Advertisement

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಸೌಭಾಗ್ಯ ಬಸವರಾಜನ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಆದೇಶ ಪ್ರತಿಯನ್ನು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಫಾತ್ಯರಾಜನ್‌, ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿ ಯವರಿಗೆ ರವಾನೆ ಮಾಡಿದ್ದಾರೆ.

ಚಿತ್ರದುರ್ಗ ಜಿಪಂ ಒಟ್ಟು 37 ಸ್ಥಾನ ಹೊಂದಿದ್ದು, ಕಾಂಗ್ರೆಸ್‌ ಪಕ್ಷ 23 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದಿತ್ತು. 2016, ಮೇ 4ರಂದು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಸೌಭಾಗ್ಯ ಬಸವರಾಜನ್‌ ಅಧ್ಯಕ್ಷೆಯಾಗಿ ಆಯ್ಕೆಯಾದರು. ಒಡಂಬಡಿಕೆ ಪ್ರಕಾರ ಇವರು 2017, ಆಗಸ್ಟ್‌ ತಿಂಗಳಲ್ಲಿ ಅಧಿಕಾರ ಹಸ್ತಾಂತರ ಮಾಡಬೇಕಿತ್ತು.
ಆದರೆ ವರಿಷ್ಠರ ಸೂಚನೆಗಳನ್ನು ಕ್ಕರಿಸಿದ ಸೌಭಾಗ್ಯ, ಅಧಿಕಾರ ಹಸ್ತಾಂತರ ಮಾಡಿರಲಿಲ್ಲ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಅವಧಿಯನ್ನು ಐದು ವರ್ಷಗಳಿಗೆ ನಿಗದಿಪಡಿಸಿದ ಕಾಯ್ದೆ ಮುಂದಿಟ್ಟುಕೊಂಡು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಆದರೆ ಒಡಂಬಡಿಕೆಯಂತೆ ಅಧಿಕಾರ ಪಡೆಯಬೇಕಿದ್ದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸಾಮಾನ್ಯ ಸಭೆ, ಕೆಡಿಪಿ ಸಭೆಗಳಿಗೆ ಅಡ್ಡಿ ಮಾಡಿದ್ದರು. ಇದೇ ವಿಷಯವಾಗಿ ದೊಡ್ಡ ಗಲಾಟೆ ಕೂಡ ಆಗಿತ್ತು. ಒಮ್ಮೆ ಕೆಡಿಪಿ ಸಭೆಯನ್ನು ಮುಂದೂಡಲಾಗಿತ್ತು. ನಂತರ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಪೊಲೀಸ್‌ ಸರ್ಪಗಾವಲಿನಲ್ಲಿ ಕೆಡಿಪಿ ಸಭೆ ನಡೆಸಿದ್ದರು. ಇಷ್ಟೆಲ್ಲ ಆದರೂ ಸಹ ಸೌಭಾಗ್ಯ ಕುರ್ಚಿ ಬಿಟ್ಟಿರಲಿಲ್ಲ. ಹೀಗಾಗಿ ಕೊನೆಗೆ ಪಕ್ಷ ಉಚ್ಚಾಟನೆಯ ಅಸ್ತ್ರ ಪ್ರಯೋಗ ಮಾಡಿದೆ.

ವಿರೋಧದ ನಡುವೆಯೂ ಮೊದಲ ಅವಧಿಗೆ ಸೌಭಾಗ್ಯರವರನ್ನು ಜಿಪಂ ಅಧ್ಯಕ್ಷರನ್ನಾಗಿ ಮಾಡಿದೆ. ಕೊಟ್ಟ ಮಾತಿನಂತೆ ರಾಜೀನಾಮೆ ನೀಡುವಂತೆ ತಾವು ಸೇರಿ ಮುಖ್ಯಮಂತ್ರಿಗಳು ಸೂಚಿಸಿದ್ದರು. ರಾಜೀನಾಮೆ ಸಲ್ಲಿಕೆಗೆ ಕಾಲಾವಕಾಶವನ್ನೂ ನೀಡಲಾಗಿತ್ತು. ಸಂಸದ ಬಿ.ಎನ್‌.ಚಂದ್ರಪ್ಪ ಅವರನ್ನು ಗೆಲ್ಲಿಸಿದಂತೆ 2018ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಕೊಡಿಸಿ ಗೆಲ್ಲಿಸಿಕೊಂಡು ಹೋಗುವ ಉದ್ದೇಶವಿತ್ತು. ಆದರೆ ರಾಜೀನಾಮೆ ನೀಡದೆ ಎಲ್ಲ ಅವಕಾಶಗಳನ್ನು ಸೌಭಾಗ್ಯ ಕಳೆದುಕೊಂಡಿದ್ದಾರೆ.
 – ಎಚ್‌.ಆಂಜನೇಯ, ಜಿಲ್ಲಾ ಉಸ್ತುವಾರಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next