ತೇರದಾಳ: ತಾಲೂಕಿಗೆ ಹಳ್ಳಿಗಳ ವಿಂಗಡಣೆ ಕುರಿತು ಪಟ್ಟಣದ ಅಲ್ಲಮಪ್ರಭುದೇವರ ದೇವಸ್ಥಾನದಲ್ಲಿ ಪಟ್ಟಣದ ವ್ಯಾಪಾರಸ್ಥರು, ಸಂಘ ಸಂಸ್ಥೆಯವರು ಹಾಗೂ ಪ್ರಮುಖರ ಸಭೆ ಜರುಗಿತು.
ತೇರದಾಳ ಹೊಸ ತಾಲೂಕಿಗೆ ಹೋಬಳಿಯ ಅರ್ಧ ಹಳ್ಳಿಗಳನ್ನು ಅಥವಾ ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಬರುವಂತೆ ಆಗ್ರಹಿಸಿ, ಜಾತಿ-ಪಕ್ಷಭೇದ ಬಿಟ್ಟು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸುವುದನ್ನು ಠರಾಯಿಸಲಾಯಿತು.
ಸಭೆಯಲ್ಲಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಮಾತನಾಡಿ, ಕಳೆದ 5 ದಶಕಗಳಿಂದ ನಡೆದು ಬಂದ ಹೋರಾಟದ ಕುರಿತು ಹಾಗೂ ತಾಲೂಕು ಎಂದು ಘೋಷಣೆಗೊಂಡರೂ ಪಟ್ಟಣಕ್ಕೆ ಕಳೆದ 3 ವರ್ಷಗಳಿಂದ ಹಳ್ಳಿಗಳ ವಿಂಗಡಣೆ ಮಾಡದೆ ವ್ಯವಸ್ಥಿತವಾಗಿ ಅನ್ಯಾಯವಾಗುತ್ತಿದೆ. ಈಗ ತೇರದಾಳ ಹೋಬಳಿಯ 32 ಹಳ್ಳಿಗಳಲ್ಲಿ ಪಟ್ಟಣ ಹಾಗೂ ಕಲ್ಲಟ್ಟಿ ಭಾಗ ಸೇರಿದಂತೆ ಕೇವಲ 9 ಊರುಗಳನ್ನು ಮಾತ್ರ ತೇರದಾಳ ತಾಲೂಕಿಗೆ ಜೋಡಿಸುವ ಮೂಲಕ ಚಿಕ್ಕ ತಾಲೂಕಾಗಿಸಲು ಕೆಲ ಕಾಣದ ಕೈಗಳು ಪ್ರಯತ್ನಿಸುತ್ತಿವೆ ಎಂದರು.
ಈಗ ಐದು ಗ್ರಾಪಂ ವ್ಯಾಪ್ತಿಯ ಏಳು ಹಳ್ಳಿಗಳನ್ನು ಮಾತ್ರ ಸೇರ್ಪಡೆ ಮಾಡಲು ಮುಂದಾಗಿದ್ದಾರೆ. ಇದು ತೇರದಾಳ ಜನತೆಗೆ ಮಾಡುತ್ತಿರುವ ಅನ್ಯಾಯ. ಆದ್ದರಿಂದ ಸರಕಾರದ ನಿಯಮಾನುಸಾರ ಒಂದು ಲಕ್ಷ ಜನಸಂಖ್ಯೆ ಹೊಂದುವ ಹಾಗೆ ಹಳ್ಳಿಗಳ ವಿಂಗಡಣೆ ಮಾಡಬೇಕು. ನಮ್ಮ ಹೋಬಳಿಯಲ್ಲಿನ ಅರ್ಧ ಹಳ್ಳಿಗಳನ್ನು ಹಾಗೂ ಒಂದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಕೊಡುವಂತೆ ಪ್ರಯತ್ನ ಮಾಡಬೇಕಾಗಿದೆ. ಮತ್ತೆ ಇನ್ನೊಂದು ತಾಲೂಕು ಆದರೆ ಆಗ ನಿಯಮಾನುಸಾರ ಮತ್ತೇ ಹಳ್ಳಿಗಳ ವಿಂಗಡಣೆ ಮಾಡಲು ಬರುತ್ತದೆ. ಅದಕ್ಕಾಗಿ ಮುಂದೆ ಪಟ್ಟಣದ ಜನತೆ ಹೋರಾಟ ಮಾಡಬೇಕೋ, ಬೇಡವೋ ಎಂಬುದನ್ನು ಚರ್ಚಿಸೋಣ ಎಂದರು.
ಡಾ| ಎಂ.ಎಸ್. ದಾನಿಗೊಂಡ, ಪ್ರವೀಣ ನಾಡಗೌಡ, ಪ್ರಭು ಗಸ್ತಿ, ಪಿ.ಎಸ್. ಮಾಸ್ತಿ, ನೇಮಣ್ಣ ಸಾವಂತನವರ, ಮಾಶೂಮ್ ಇನಾಮ್‌ದಾರ್, ಶೆಟ್ಟೆಪ್ಪ ಸುಣಗಾರ, ಯಾಶೀನ ಸಾತಬಚ್ಚೆ, ರವಿ, ಸಲಬನ್ನವರ, ಪ್ರಕಾಶ ಧುಪದಾಳ, ಉಸ್ಮಾನ ಮುಜಾವರ, ಸಿದ್ದು ದೊಡಮನಿ, ಎಂ.ಸಿ. ತೆಳಗಿನಮನಿ ಮಾತನಾಡಿದರು.
ಹೋರಾಟ ಸಮಿತಿಯ ಅಧ್ಯಕ್ಷ ಭುಜಬಲಿ ಕೆಂಗಾಲಿ, ಭೀಮಗೊಂಡ ಸದಲಗಿ, ಸುರೇಶ ಕಬಾಡಗಿ, ಮಾರುತಿ ಗುರವ, ಮಲ್ಲಿನಾಥ ಬೊಳಗೊಂಡ, ತುಳಜಪ್ಪ ಅಥಣಿ, ರಾಯಪ್ಪಣ್ಣ ಕುಂಬಾರ, ತಿಮ್ಮಣ್ಣ ಗಾಡಿವಡ್ಡರ, ಎಸ್.ವ್ಹಿ. ಗೋಠೆಕರ, ನಾರಾಯಣ ಪತ್ತಾರ, ದಯಾನಂದ ಕಾಳೆ, ಸಮಾಜಗಳ ಮುಖಂಡರು, ಹೋರಾಟ ಸಮಿತಿಯವರು, ಯುವಕರು ಉಪಸ್ಥಿತರಿದ್ದರು.
ತೇರದಾಳ ಹೊಸ ತಾಲೂಕಿಗೆ ಹೋಬಳಿಯ ಅರ್ಧ ಹಳ್ಳಿಗಳನ್ನು ಅಥವಾ ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಬರುವಂತೆ ಆಗ್ರಹಿಸಿ, ಜಾತಿ-ಪಕ್ಷಭೇದ ಬಿಟ್ಟು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲಾಗುವುದು ಎಂದು ಬಸವರಾಜ ಬಾಳಿಕಾಯಿ ಘೋಷಿಸಿದರು.