Advertisement

ಸೊರಬ ಪಪಂ: ಶೇ. 74 ಮತದಾನ

04:19 PM Jun 02, 2019 | Team Udayavani |

ಸೊರಬ: ಇಲ್ಲಿನ ಪಟ್ಟಣ ಪಂಚಾಯತ್‌ನ 12 ವಾರ್ಡ್‌ಗಳಿಗೆ ಶನಿವಾರ ನಡೆದ ಚುನಾವಣೆಯು ಬಹುತೇಕ ಶಾಂತಿಯುತವಾಗಿ ನಡೆದಿದೆ. ಶೇ. 74.94ರಷ್ಟು ಮತದಾನವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರಕ್ರಿಯೆ ಮುಕ್ತಾಯಗೊಂಡಿದೆ.

Advertisement

ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭಗೊಂಡಿದ್ದು, ಪ್ರಾರಂಭದಲ್ಲಿ ನೀರಸಗೊಂಡ ಮತದಾನ ಪ್ರಕ್ರಿಯೆಯು ಮಧ್ಯಾಹ್ನದ ಹೊತ್ತಿಗೆ ಚುರುಕುಗೊಂಡಿತು. ಮತದಾನ ಕೇಂದ್ರಗಳತ್ತ ಮತದಾರರು ಉತ್ಸಾಹದಿಂದ ಮತದಾನ ಮಾಡಲು ಆಗಮಿಸುತ್ತಿದ್ದುದು ಕಂಡು ಬಂದಿತು. ಶಾಂತಿಯುತ ಚುನಾವಣೆ ನಡೆಸಲು ತಾಲೂಕು ಆಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿಯಾಗಿ ಮೀಸಲು ಪಡೆ ವಾಹನ ನಿಯೋಜನೆ ಮಾಡಲಾಗಿತ್ತು.

ಪ್ರತಿ ವಾರ್ಡ್‌ಗಳಲ್ಲೂ ಮದಾರರನ್ನು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತದಾನ ಮಾಡುವಂತೆ ವಿವಿಧ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮತದಾರರನ್ನು ಮಾತನಾಡಿಸುತ್ತಿದ್ದ ದೃಶ್ಯ ಕಂಡು ಬಂದಿತು.

ವಾರ್ಡ್‌ ನಂ. 10ರ ಉರ್ದು ಶಾಲೆಯ ಮತಗಟ್ಟೆಯಲ್ಲಿ ಮತದಾನದ ಅವಧಿ ಇನ್ನೂ 5 ನಿಮಿಷ ಬಾಕಿ ಉಳಿದಿರುವಾಗಲೇ ಇಬ್ಬರು ಮತದಾರರು ಮತಗಟ್ಟೆ ಬಳಿ ಮತ ಚಲಾಯಿಸಲು ಆಗಮಿಸಿದ್ದರು. ಆದರೆ ಪಿಆರ್‌ಒ ಚುನಾವಣೆ ಪ್ರಕ್ರಿಯೆಯನ್ನು 5 ನಿಮಿಷ ಮೊದಲೇ ಮುಗಿಸಿದ್ದು, ಮತದಾರರನ್ನು ಸಮಯ ಮುಗಿದಿದೆ. ಮತ ಚಲಾಯಿಸಲು ಒಳಗಡೆ ಬಿಡಬೇಡಿ ಎಂಬ ಸೂಚನೆ ಮೇರೆಗೆ ಪೊಲೀಸರು ಮತದಾರರನ್ನು ತಡೆಗಟ್ಟಿದ ಹಿನ್ನೆಲೆಯಲ್ಲಿ ಶಾಲೆಯ ಮುಂಭಾಗದಲ್ಲಿ ಜಮಾಯಿಸಿದ್ದ ವಿವಿಧ ಪಕ್ಷದ ಮುಖಂಡರು ಮತದಾನಕ್ಕೆ 5 ನಿಮಿಷ ಬಾಕಿ ಇರುವಾಗಲೇ ಮತದಾನ ಪ್ರಕ್ರಿಯೆ ನಿಲ್ಲಿಸಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಇಬ್ಬರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ವ್ಯವಸ್ಥೆ ಹಾಗೂ ಸ್ಟ್ರಾಂಗ್‌ ರೂಂ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

12 ಮತಗಟ್ಟೆಗಳಲ್ಲಿ 1 ಮತ್ತು 5ನೇ ಮತಗಟ್ಟೆಗಳು ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಮತದಾನ ನಡೆಯಲು ಅವಕಾಶ ಕಲ್ಪಿಸಿಕೊಡಲಾಗಿತ್ತು. 8, 9, 11 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿತ್ತು.

ಪ್ರತಿ ಮತಗಟ್ಟೆಯಲ್ಲಿ ಒಬ್ಬ ಪಿಆರ್‌ಒ, ಒಬ್ಬ ಎಪಿಆರ್‌ಒ, ಇಬ್ಬರು ಮತಗಟ್ಟೆ ಅಧಿಕಾರಿಗಳು, ಒಬ್ಬ ಗುರುತು ಮಾಡುವ ಅಧಿಕಾರಿ, ಒಬ್ಬ ಬಿಎಲ್ಒ ಹಾಗೂ ಒಬ್ಬ ಡಿ- ದರ್ಜೆ ನೌಕರ ಕರ್ತವ್ಯ ನಿರ್ವಹಿಸಿದರು.

ಚುನಾವಣೆ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಚುನಾವಣಾ ಕರ್ತವ್ಯಕ್ಕೆ 46 ಕಾನ್‌ಸ್ಟೇಬಲ್, ಒಬ್ಬರು ಡಿವೈಎಸ್‌ಪಿ, ಇಬ್ಬರು ಪಿಎಸ್‌ಐ, ಒಬ್ಬ ಸಿಪಿಐ, 1 ರಿಜರ್ವ್‌ ಪೊಲೀಸ್‌ ವಾಹನ, 1 ಡಿಆರ್‌ ನಿಯೋಜಿಸಲಾಗಿತ್ತು. ಮತದಾರರು ಮೊಬೈಲ್ ಅನ್ನು ಮತಗಟ್ಟೆ ಕೇಂದ್ರದೊಳಗೆ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿತ್ತು.

ವಾರ್ಡ್‌ವಾರು ಮತದಾನ:
ವಾರ್ಡ್‌ 1ರಲ್ಲಿ 68.99, ವಾರ್ಡ್‌ 2ರಲ್ಲಿ 77.61, ವಾರ್ಡ್‌ 3ರಲ್ಲಿ 75.17, ವಾರ್ಡ್‌ 4ರಲ್ಲಿ 74.19, ವಾರ್ಡ್‌ 5ರಲ್ಲಿ 69.07, ವಾರ್ಡ್‌ 6ರಲ್ಲಿ 71.14, ವಾರ್ಡ್‌ 7ರಲ್ಲಿ 70.28, ವಾರ್ಡ್‌ 8ರಲ್ಲಿ 81.65, ವಾರ್ಡ್‌ 9ರಲ್ಲಿ 84.19, ವಾರ್ಡ್‌ 10ರಲ್ಲಿ 71.55, ವಾರ್ಡ್‌ 11ರಲ್ಲಿ 85.21, ವಾರ್ಡ್‌ 12ರಲ್ಲಿ 71.43ರಷ್ಟು ಮತದಾನ ನಡೆದಿದ್ದು, ವಾರ್ಡ್‌ 11ರಲ್ಲಿ ಅತಿ ಹೆಚ್ಚು ಮತದಾನ ನಡೆದರೆ, ವಾರ್ಡ್‌ 1ರಲ್ಲಿ ಅತಿ ಕಡಿಮೆ ಮತದಾನ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next