Advertisement
ತಾಲೂಕು ಕೇಂದ್ರವಾದ ಸೊರಬ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ 1988ರಲ್ಲಿ ಆರಂಭವಾದ ಸಾರ್ವಜನಿಕ ಗ್ರಂಥಾಲಯಕ್ಕೆ 31 ವರ್ಷಗಳು ಸವೆದಿವೆ. ಸುಮಾರು 25,762 ಪುಸ್ತಕಗಳಿದ್ದು, 1,192 ಸದಸ್ಯರಿದ್ದಾರೆ. ಆದರೆ, ನಿತ್ಯ ಗ್ರಂಥಾಲಯಕ್ಕೆ ಭೇಟಿ ಕೊಡುವವರ ಸಂಖ್ಯೆ ಸುಮಾರು 100 ಮಾತ್ರ! ಸ್ವಂತ ಕಟ್ಟಡ ಸೇರಿದಂತೆ ಸೂಕ್ತ ಸೌಲಭ್ಯಗಳ ಕೊರತೆ ಹಾಗೂ ಜನನಿಬಿಡ ಪ್ರದೇಶದಲ್ಲಿರದಿರುವುದೇ ಇದಕ್ಕೆ ಕಾರಣವಾಗಿದೆ.
Related Articles
Advertisement
ಸ್ವಂತ ಕಟ್ಟಡಗಳ ಕೊರತೆ: ತಾಲೂಕಿನಲ್ಲಿ 39 ಸಾರ್ವಜನಿಕ ಗ್ರಂಥಾಲಯಗಳಿದ್ದು, ಚಂದ್ರಗುತ್ತಿ, ತವನಂದಿ, ಕುಪ್ಪಗಡ್ಡೆ ಗ್ರಾಮಗಳಲ್ಲಿ ಮಾತ್ರ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಉಳಿದಂತೆ ಪಂಚಾಯತ್ ಕಟ್ಟಡ, ಖಾಸಗಿ ಕಟ್ಟಡಗಳಲ್ಲಿ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಕೂಗು ಓದುಗ ಬಳಗದಿಂದ ವ್ಯಕ್ತವಾಗುತ್ತಿದೆ.
ಶೌಚಗೃಹ ಸಮಸ್ಯೆ: ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯದಲ್ಲಿ ಶೌಚಗೃಹದ ಸಮಸ್ಯೆ ಓದುಗರನ್ನು ಕಾಡುತ್ತಿದೆ. ಕಟ್ಟಡದ ಪಕ್ಕದಲ್ಲಿಯೇ ಪಪಂಗೆ ಸೇರಿದ ಸಾರ್ವಜನಿಕ ಶೌಚಗೃಹವಿದ್ದರೂ, ಬಳಕೆಗೆ ಯೋಗ್ಯವಾಗಿಲ್ಲ.
ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. ಗ್ರಂಥಾಲಯದಲ್ಲಿ ಮೂಗು ಮುಚ್ಚಿಕೊಂಡೇ ಓದುವ ಸ್ಥಿತಿ ಇದ್ದು, ಇನ್ನು ಮಹಿಳಾ ಓದುಗರಂತೂ ಇತ್ತ ಕಡೆ ಮುಖವನ್ನೇ ಮಾಡದಂತಾಗಿದೆ. ಪಟ್ಟಣದ ಹಳೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಜಾಗದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡುವ ಯೋಜನೆ ಇದ್ದು, ಇದಕ್ಕೆ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದರೂ ಈವರೆಗೂ ಯಾವುದೇ ಪ್ರಕ್ರಿಯೆ ಪ್ರಾರಂಭವಾಗಿಲ್ಲ.