Advertisement

ಜನರು ನಿರಾಶ್ರಿತರಾಗಲು ಬಿಡಲ್ಲ: ನಾ. ಡಿಸೋಜ

03:39 PM Jul 01, 2019 | Naveen |

ಸೊರಬ: ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದಿಂದ 2085 ಕುಟುಂಬಗಳ 17 ಸಾವಿರ ಜನರನ್ನು ಸರ್ಕಾರ ಲಾರಿಯಲ್ಲಿ ತುಂಬಿಕೊಂಡು ಬೀದಿಯಲ್ಲಿ ಎಸೆದು ಹೋಗಿದ್ದು ನೆನಪಿಸಿಕೊಂಡರೆ ಕಣೀ¡ರು ಬರುತ್ತದೆ. ಮತ್ತೆ ಈ ಯೋಜನೆಯಿಂದ ಜನರನ್ನು ನಿರಾಶ್ರಿತರಾಗುವುದಕ್ಕೆ ಬಿಡುವುದಿಲ್ಲ ಎಂದು ಸಾಹಿತಿ ಹಾಗೂ ಶರಾವತಿ ಉಳಿಸಿ ಹೋರಾಟ ಸಂಘಟನೆಯ ಗೌರವಾಧ್ಯಕ್ಷ ನಾ. ಡಿಸೋಜ ಹೇಳಿದರು.

Advertisement

ಪಟ್ಟಣದ ಲಯನ್ಸ್‌ ಸಭಾ ಭವನದಲ್ಲಿ ರೋಟರಿ ಕ್ಲಬ್‌ ವತಿಯಿಂದ ಏರ್ಪಡಿಸಿದ್ದ ಶರಾವರಿ ನೀರಿಗಾಗಿ ಬೃಹತ್‌ ಹೋರಾಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರಿಗೆ ನೀರು ಕೊಡಬಾರದು ಎಂಬುದಿಲ್ಲ. ಇಲ್ಲಿನ ಅನೇಕ ಜನರು ಅಲ್ಲಿ ನೆಲೆಸಿದ್ದಾರೆ. ಆದರೆ ಈ ಯೋಜನೆಯಿಂದ ಬೆಂಗಳೂರಿನವರೆಗೂ ಹಲವಾರು ಕುಟುಂಬಗಳು ಬೀದಿ ಪಾಲಾಗಲಿವೆ. ಸರ್ಕಾರ ಶರಾವತಿ ಸಂತ್ರಸ್ತರ ಮೇಲೆ ಮತ್ತೆ ದಬ್ಟಾಳಿಕೆ ಮಾಡುವುದಕ್ಕೆ ಬಿಡುವುದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರಿನಲ್ಲಿರುವ 1500 ಕೆರೆಗಳಲ್ಲಿ 238 ಕೆರೆಗಳು ಮಾತ್ರ ಉಳಿದಿವೆ. ಮಳೆ ನೀರು ಸಂಗ್ರಹಿಸಿ ಹಾಗೂ ಇರುವ ನೀರನ್ನು ದುರ್ಬಳಕೆ ಮಾಡದೆ ಬಳಸಿದರೆ ಬೆಂಗಳೂರಿನ ನೀರಿನ ದಾಹ ತೀರುತ್ತದೆ. ಶರಾವತಿ ನದಿಯಿಂದ ನೀರನ್ನು ಕೊಂಡೊಯ್ಯತ್ತೇವೆ ಎನ್ನುವುದು ಮೂರ್ಖತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶರಾವತಿ ನದಿ ಸು.30 ಕಿ.ಮೀ ವಿಶಾಲವಾಗಿ ಹರಿಯುತ್ತದೆ, ಇದನ್ನು ಆಶ್ರಯಿಸಿಕೊಂಡು ನೂರಾರು ಮೀನುಗಾರರ ಕುಟುಂಬಗಳು ಜೀವನ ಮಾಡುತ್ತವೆ. ಇವುಗಳನ್ನು ಬೀದಿಪಾಲು ಮಾಡುವ ಜತೆಗೆ ಮೀನಿನ ಸಂತತಿ ನಾಶವಾಗುತ್ತದೆ. ಮಲೆನಾಡಿನ ಹೆಸರು ಕಣ್ಮರೆಯಾಗುತ್ತದೆ. ಶರಾವತಿ ದಂಡೆಯಲ್ಲಿ ಅರಣ್ಯ ಇಲಾಖೆಯವರು ಅಕೇಶಿಯ ಮತ್ತು ನೀಲಗಿರಿ ಬೆಳೆಸಿ ನದಿಯ ಪಾವಿತ್ರ್ಯ ಹಾಳುಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅರಣ್ಯ ನಾಶದಿಂದ ಮಳೆ ಕೊರತೆಯಾಗುತ್ತಿದೆ ಎಂದರು.

ಶರಾವತಿ ನೀರಿನ ಯೋಜನೆ ತಡೆಯಲು ಜಿಲ್ಲೆಯ, ನೆರೆಯ ಜಿಲ್ಲೆಯ ಜನ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

Advertisement

ಸೊರಬ ಅಭಿವೃದ್ಧಿಗೆ ರೈಲ್ವೆ ಸಂಪರ್ಕ ಅಗತ್ಯವಿದೆ. ಸಾಗರದಿಂದ ಸೊರಬಕ್ಕೆ ರೈಲು ಚಲಿಸಲು ಯಾವುದೇ ಗುಡ್ಡ ಒಡೆಯುವ, ಸುರಂಗ ಕೊರೆಯುವ ಅಗತ್ಯವಿಲ್ಲ. ರೈಲ್ವೆ ಅಧಿಕಾರಿಗಳನ್ನು ಮನವೊಲಿಸಿಕೊಂಡು ರೈಲ್ವೆ ಯೋಜನೆ ಪಡೆಯಲು ಕೈ ಜೋಡಿಸುತ್ತೇನೆ ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಂಜುನಾಥ್‌ ಗೌಡ ಮಾತನಾಡಿ, ಶರಾವತಿ ನೀರನ್ನು ಬೆಂಗಳೂರಿಗೆ ನೀಡಲು ಸಾಧ್ಯವಿಲ್ಲ. ಬೆಂಗಳೂರಿನ ಬೆಳವಣಿಗೆ ಕುಗ್ಗಿಸಿ. ಸೊರಬ ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕುಡಿಯಲು ಹಾಗೂ ಕೃಷಿಗೆ ನೀರಿನ ಕೊರತೆಯಿದ್ದು ಸರ್ಕಾರ ಮೊದಲು ಇಲ್ಲಿಗೆ ನೀರಾವರಿ ಕಲ್ಪಿಸಲಿ ಎಂದರು.

ಸಮಾಜ ಕಾರ್ಯಕರ್ತೆ ರೇಣುಕಮ್ಮ ಕಪ್ಪಗಳಲೆ ಮಾತನಾಡಿ, ತಾಲೂಕಿನ ಕೆರೆಗಳು ಹೂಳು ತುಂಬಿ ಗದ್ದೆಗಳಾಗಿವೆ. ಅವುಗಳನ್ನು ಅಭಿವೃದ್ಧಿಪಡಿಸಲಾಗದ ಸರ್ಕಾರ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೆ ತಂದು ಜನರ ಬದುಕು ಹಾಳು ಮಾಡುವುದಲ್ಲದೆ, ಹಣ ಗಳಿಕೆಯ ಸಂಚು ಹಾಕಿಕೊಂಡಿದೆ ಎಂದು ಆರೋಪಿಸಿದರು.

ಡಾ| ಮಹಾಂತ ಮಹಾಸ್ವಾಮಿ ಮಾತನಾಡಿ, ಶರಾವತಿ ಇಲ್ಲಿನ ಜರ ಜೀವನದಿ. ಯಾವುದೇ ಕಾರಣಕ್ಕೂ ಬೆಂಗಳೂರಿಗೆ ನೀರು ಹರಿಸಲು ಅವಕಾಶ ಕೊಡುವುದಿಲ್ಲ. ಬೆಂಗಳೂರಿನಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಾಗೂ ಮಳೆಯಾದಾಗ ಹರಿದು ನಾಶವಾಗುವ ನೀರನ್ನು ಸಮರ್ಪಕವಾಗಿ ಮೊದಲು ಬಳಸಿಕೊಳ್ಳಲಿ ಎಂದರು.

ರೋಟರಿ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷ ಡಾ| ಎಚ್.ಇ.ಜ್ಞಾನೇಶ್‌ ಮಾತನಾಡಿ, ಶರಾವತಿ ಬೆಂಗಳೂರಿಗೆ ಅವಶ್ಯಕತೆ ಇರಬಹುದು. ಆದರೆ ಅದು ಶಿವಮೊಗ್ಗ ಜನರ ಹಕ್ಕಾಗಿದೆ. ಮುಳುಗಡೆಯಿಂದ ನೊಂದು ಬೆಂದ ಜನರಿಗೆ ಮತ್ತೆ ಸಮಸ್ಯೆ ಕೊಡುವುದು ಬೇಡ. ಮಲೆನಾಡಿನ ಮಡಿಲಿನ ನದಿಯಾಗಿದ್ದು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರು.

ಪಟ್ಟಣದ ಹಿರಿಯ ಮುಖಂಡ ಎಚ್.ಎಸ್‌ .ಮಂಜಪ್ಪ ಮಾತನಾಡಿ, ಶರಾವರಿ ನಮ್ಮ ಜೀವನದಿ. ಅದನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಸಿದ್ಧ. ಸರ್ಕಾರದಿಂದ ತಾಲೂಕಿಗೆ ರೈಲ್ವೆ ಸಂಪರ್ಕ ಕಲ್ಪಿಸಿಕೊಡಲು ಸದ್ಯದ ದಿನಗಳಲ್ಲಿ ಬೃಹತ್‌ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದರು. ರೋಟರಿ ಕ್ಲಬ್‌ ಅಧ್ಯಕ್ಷ ಡಿ.ಎಸ್‌. ಶಂಕರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಾವತಿ ನದಿ ನೀರನ್ನು ಬೆಂಗಳೂರಿಗೆ ನೀಡಲು ಸಾಧ್ಯವಿಲ್ಲ. ಸರ್ಕಾರ ಇಲ್ಲಿನ ಜನರ ಭಾವನೆಗಳನ್ನು ಕೆರಳಿಸಬಾರದು. ಎಂದರು. ರೋಟರಿ ಕ್ಲಬ್‌ ಸದಸ್ಯ ಜಾವಿದ್‌ ಅಹ್ಮದ್‌ ಸ್ವಾಗತಿಸಿದರು. ರಾಜು ಹಿರಿಯಾವಲಿ ನಿರೂಪಿಸಿದರು. ಕಾರ್ಯದರ್ಶಿ ಯಶೋಧರ, ನಿಕಟಪೂರ್ವ ಅಧ್ಯಕ್ಷ ನಾಗರಾಜ್‌ ಗುತ್ತಿ, ಸಮಾಜ ಚಿಂತಕ ರಾಜಪ್ಪ ಮಾಸ್ತರ್‌, ವಾಮುದೇವ ಗೌಡ, ಎಚ್.ಎಸ್‌. ಮಂಜಪ್ಪ, ಮಂಜುನಾಥ ಗೌಡ, ನಟರಾಜ್‌ , ರೇಣುಕಮ್ಮ ಕಪ್ಪಗಳಲೆ, ಹಾಲೇಶಪ್ಪ ಗೌಡ, ಶಿವಪ್ಪ ಓಟೂರು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next