ಸೊರಬ: ದೇಶವೇ ಆತಂಕದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಕೋವಿಡ್ ಹರಡುವಿಕೆ ತಡೆಗಟ್ಟಲು ತಮ್ಮ ಜೀವದ ಹಂಗನ್ನು ತೊರೆದು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ಯೋಧರ ಸೇವೆ ಪ್ರಶಂಸನಾರ್ಹ ಎಂದು ಸಂಸದ ಬಿ.ವೈ. ರಾಘವೇಂದ್ರ ಶ್ಲಾಘಿಸಿದರು.
ಪಟ್ಟಣದ ರಂಗಮಂದಿರಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋವಿಡ್-19 ವಾರಿಯರ್ಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಲಾಕ್ ಡೌನ್ ಕರೆಗೆ ಇಡೀ ದೇಶವೇ ಬೆಂಬಲ ಸೂಚಿಸಿತು. ಪರಿಣಾಮ ಸಂಕಷ್ಟದ ಸ್ಥಿತಿಗೆ ಎದುರಾದ ದುಡಿದು ತಿನ್ನುವ ವರ್ಗಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಸಹ ಘೋಷಿಸಿದ್ದು, ಅದನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಯಕವನ್ನೇ ಜೀವನಾಧಾರವನ್ನಾಗಿಸಿಕೊಂಡ ವಿವಿಧ ಸಮುದಾಯಗಳಿಗೆ ಹಾಗೂ ವಿವಿಧ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಆರ್ಥಿಕವಾಗಿ ಪ್ರೋತ್ಸಾಹ ನೀಡಲಾಗುತ್ತಿದೆ. ಎಲ್ಲರೂ ಮನೆಯಲಿದ್ದ ಸಂದರ್ಭದಲ್ಲಿ ಬೀದಿಗೆ ಇಳಿದು ಕೋವಿಡ್ ಯೋಧರಾಗಿ ಮೊದಲ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ 50 ಲಕ್ಷ ರೂ. ವಿಮೆ ನೀಡುವ ಚಿಂತನೆಯೂ ಪರಿಶೀಲನೆಯ ಹಂತದಲ್ಲಿದೆ ಎಂದರು.
ಜಿಲ್ಲೆಯಲ್ಲಿ ಅಭಿವೃದ್ಧಿಯ ಮಹಾಪೂರವೇ ನಡೆಯುತ್ತಿದ್ದು, ಮಾದರಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಮೂಲಕ ಮುಖ್ಯಮಂತ್ರಿ ಚಾಲನೆ ನೀಡುತ್ತಿದ್ದಾರೆ. ನುಡಿದಂತೆ ನಡೆಯುತ್ತಿರುವ ಮುಖ್ಯಮಂತ್ರಿ ಬಿಎಸ್‌ವೈ ಅವರು ಶಿಕಾರಿಪುರ ಹಾಗೂ ಸೊರಬ ತಾಲೂಕಿನಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಸುಮಾರು 1500 ಕೋಟಿ. ರೂ., ನೀರಾವರಿ ಯೋಜನೆಗಳ ಕಾಮಗಾರಿ ಭರದಿಂದ ಸಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ಕುಮಾರ್ ಬಂಗಾರಪ್ಪ ಮಾತನಾಡಿ, ಕೋವಿಡ್ ವಾರಿಯರ್ಗಳು ಕೇವಲ ಸಂಬಳಕ್ಕಾಗಿ ಕಾರ್ಯ ನಿರ್ವಹಿಸದೇ ಸೇವಾ ಮನೋಭಾವದಿಂದ ಜೀವವನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದ್ದು ಅರ್ಥಪೂರ್ಣವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಕೋವಿಡ್ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು,ಕೋವಿಡ್ ಯೋಧರ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತಿದೆ. ಮಂದಿರ, ಮಸೀದಿ, ಚರ್ಚ್‌ಗಳು ಸಹ ಬಾಗಿಲು ಹಾಕಿದ ಸಂದರ್ಭದಲ್ಲಿ ಜನತೆ ಮನೆಯಲ್ಲಿಯೇ ಪ್ರಾರ್ಥಿಸುವ ಮೂಲಕ ಕೊರೊನಾ ಹತೋಟಿಕೆಗೆ ಸಹಕಾರ ನೀಡಿದ್ದಾರೆ ಎಂದರು.
ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಸದಸ್ಯ ನಾಗರಾಜ ಚಿಕ್ಕಸವಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜ ಗೌಡ ಚಿಕ್ಕಾವಲಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀಪಾದ ಹೆಗಡೆ ನಿಸರಾಣಿ, ಅಗಡಿ ಅಶೋಕ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ತಾಲೂಕು ಅಧ್ಯಕ್ಷ ಗುರುಗೌಡ ಬಾಸೂರು, ಉಪ ವಿಭಾಗಾಧಿಕಾರಿ ಡಾ| ಡಿ. ನಾಗರಾಜ್, ತಹಶೀಲ್ದಾರ್ ನಫೀಸಾ ಬೇಗಂ, ಡಿಎಚ್‌ಒ ಡಾ| ರಾಜೇಶ್ ಸುರಗಿಹಳ್ಳಿ, ಟಿಎಚ್‌ಒ ಡಾ| ಅಕ್ಷತಾ ಖಾನಾಪುರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಈರಣ್ಣ ಮತ್ತಿತರರು ಇದ್ದರು