Advertisement

ಸೊರಬ: ಬಿದಿರಿನ ಬುಟ್ಟಿ ಉದ್ಯಮಕ್ಕೆ ಬಂತು ಸಂಕಷ್ಟ

05:26 PM Apr 15, 2024 | Nagendra Trasi |

ಉದಯವಾಣಿ ಸಮಾಚಾರ
ಸೊರಬ: ಬಿದಿರಿನಿಂದ ಬುಟ್ಟಿ ಹೆಣೆದು ಮಾರಾಟ ಮಾಡುವ ಮೂಲಕ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳು ಆಧುನಿಕ ತಂತ್ರಜ್ಞಾನದ ಪರಿಕರಗಳ ಮತ್ತು ಪ್ಲಾಸ್ಟಿಕ್‌ ಪರಿಕರಗಳ ನಡುವೆ ಪೈಪೋಟಿ ನಡೆಸಲಾಗದ ಸ್ಥಿತಿ ತಲುಪಿವೆ. ಪರಂಪರೆಯಿಂದ ಮಾಡಿಕೊಂಡು ಬಂದಿರುವ ವೃತ್ತಿ ಇಂದು ಸಂಕಷ್ಟವನ್ನು ಎದುರಿಸುವಂತಾಗಿದೆ.

Advertisement

‘ಬಿದಿರು ನಾನಾರಿಗಲ್ಲಾದವಳು’ ಎಂಬ ಜನಪದ ಹಾಡು ಹೆಚ್ಚು ಇವರ ಬದುಕಿಗೆ ಅನ್ವರ್ಥ ವಾಗುತ್ತದೆ. ರೈತೋಪಯೋಗಿ ಕೃಷಿಗೆ
ಅಗತ್ಯವಾದ ವಿವಿಧ ರೀತಿಯ ಬುಟ್ಟಿಗಳಾದ ಬಿತ್ತನೆ ಮಾಡುವ ಬಿದಿರಿನ ಸಡ್ಡೆ, ಗೊಬ್ಬರ ಬೀಸುವ ಅಗಲವಾದ ತಟ್ಟೆಗಳು, ಮಂಖರಿ, ಎತ್ತುಗಳ ಬಾಯಿಗೆ ಹಾಕುವ ಬಿದಿರಿನ ಹೊಡಲು, ಧಾನ್ಯವನ್ನು ಸಂಗ್ರಹಿಸಲು ಭತ್ತದ ಕಣಜ, ಬೆತ್ತದ ಬುಟ್ಟಿ, ಚಿಬುಲ, ಬಿದಿರಿನ ತೊಟ್ಟಿಲು, ಮೀನು ಹಿಡಿಯುವ ಕೂಣಿ, ಮಠಗಳ ಸ್ವಾಮೀಜಿಗಳಿಗೆ  ದಂಡಿಗೆ ಹೀಗೆ ವಿವಿಧ ಬಗೆಯ ಸಲಕರಣೆಗಳನ್ನು
ತಯಾರಿಸುತ್ತಿದ್ದ ಕುಟುಂಬಗಳ ಸ್ಥಿತಿ ಇದೀಗ ಅಯೋಮಯವಾಗಿದೆ.

ತಾಲೂಕಿನ ಜಡೆ, ಕಲ್ಕೊಪ್ಪ, ಗುಡವಿ, ಬಳ್ಳಿ ಬಯಲು, ಹುಲೆಮರಡಿ, ಕಂತನಹಳ್ಳಿ, ಜಡೆ ಯಡಗೊಪ್ಪ, ಪುರದೂರು, ಮನ್ಮನೆ,
ಹಿರೇಕಸವಿ, ಚಿಕ್ಕಕಸವಿ ಸೇರಿದಂತೆ ಇನ್ನೂ ಅನೇಕ ಹಳ್ಳಿಗಳಲ್ಲಿ ಬುಟ್ಟಿ ಹೆಣೆಯುವುದನ್ನೇ ಮೂಲ ವೃತ್ತಿ ಮಾಡಿಕೊಂಡು ಬಂದಿರುವ ಕುಟುಂಬಗಳು ಇವೆ. ಆಧುನಿಕ ತಂತ್ರಜ್ಞಾನದ ಪರಿಕರಗಳ ಉತ್ಪಾದನೆ ನಡುವೆ ಪೈಪೋಟಿ ನಡೆಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಈ ವೃತ್ತಿ ಅಳಿವಿನ ಅಂಚಿಗೆ ಬಂದು ನಿಂತಿದೆ. ಪರ್ಯಾಯ ವೃತ್ತಿ ಕಡೆ ಒಲವು ತೋರಲು
ಬಯಸುವಂತಾಗಿದೆ.

ಪರಂಪರೆಯಿಂದ ಮಾಡಿಕೊಂಡು ಬಂದಿರುವ ಈ ವೃತ್ತಿಯ ಕಡೆ ಯುವಕರು ಆಸಕ್ತಿ ತೋರುತ್ತಿಲ್ಲ. ಇದರಿಂದಾಗುವ ದಿನದ ಸಂಪಾದನೆ ಅತ್ಯಂತ ಕಡಿಮೆ. ಆದ್ದರಿಂದ ಇತರೆ ಕೆಲಸದ ಕಡೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಇನ್ನೊಂದು ಕಡೆ ಇದರಿಂದ ಬರುವ ಆದಾಯದಲ್ಲಿ ಮಕ್ಕಳಿಗೆ ಶಿಕ್ಷಣ ಒದಗಿಸಲು, ಕುಟುಂಬ ನಿರ್ವಹಣೆ ಮಾಡಲು ಅತ್ಯಂತ ಕಷ್ಟವಾಗಿದೆ. ಸರ್ಕಾರ ಇಂತಹ ಕುಲಕಸುಬು ಮಾಡುವ ಕುಟುಂಬಗಳಿಗೆ ಆರ್ಥಿಕ ಸೌಲಭ್ಯ ಕಲ್ಪಿಸಲು ಮುಂದಾಗಬೇಕು.

ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿರುವ ಕುಟುಂಬಗಳಿಗೆ ಅರ್ಥಿಕ ನೆರವು ನೀಡುವ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿಗೊಳಿಸಲು ಸರ್ಕಾರ ವಿವಿಧ ಜನಪರವಾದ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಬೇಕು.
*ಮಂಜುನಾಥ್‌ ಸಿ.ಎಚ್‌.
ಗುಡವಿ ಗ್ರಾಪಂ ಉಪಾದ್ಯಕ್ಷ

Advertisement

ಪರಂಪರಾಗತವಾಗಿ ಮುಂದುವರಿಸಿಕೊಂಡು ಬಂದಿರುವ ಈ ವೃತ್ತಿಯನ್ನು ಬಿಟ್ಟು ಬೇರೆ ಯಾವ ವೃತ್ತಿ ಮಾಡಲು ಸಾಧ್ಯವಿಲ್ಲ. ಸರ್ಕಾರ ನಮ್ಮ ಜೀವನೋಪಾಯಕ್ಕೆ ವಿವಿಧ ಸಾಲ ಸೌಲಭ್ಯ ಕಲ್ಪಿಸಿದಾಗ ಮಾತ್ರ ಇತರ ಸಮುದಾಯದ ಹಾಗೆ ಪ್ರಗತಿ ಕಾಣಲು ಸಾಧ್ಯ.
*ಬಸವರಾಜಪ್ಪ
ಬುಟ್ಟಿ ಹೆಣೆಯುವ ಕೆಲಸಗಾರ

*ರವಿ ಕಲ್ಲಂಬಿ

Advertisement

Udayavani is now on Telegram. Click here to join our channel and stay updated with the latest news.

Next