Advertisement

ಡಯಾಲಿಸಿಸ್‌ ಘಟಕ ಸ್ಥಗಿತ: ರೋಗಿಗಳ ಪರದಾಟ

04:05 PM Jul 05, 2020 | Naveen |

ಸೊರಬ: ಬಡವರಿಗೆ ವರವಾಗಬೇಕಿದ್ದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್‌ ಘಟಕ ಸ್ಥಗಿತಗೊಂಡ ಪರಿಣಾಮ ರೋಗಿಗಳು ಪರದಾಡುವಂತಾಗಿದೆ. ಕೋವಿಡ್ ಆತಂಕದಿಂದ ಬಡವರು ಜೀವನ ಸಾಗಿಸುವುದೇ ಕಷ್ಟ ಎನ್ನುವ ಸ್ಥಿತಿ ಇರುವಾಗಲೇ, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಘಟಕ ಸ್ತಬ್ಧವಾಗಿ ಇಪ್ಪತ್ತು ದಿನಗಳು ಕಳೆದರೂ ದುರಸ್ತಿ ಕಾರ್ಯ ನಡೆಯದಿಲ್ಲ. ಇದರಿಂದ ಬಡವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ಶಿಕಾರಿಪುರದಲ್ಲಿ ಚಿಕಿತ್ಸೆ: ಶಾಸಕ ಕುಮಾರ್‌ ಬಂಗಾರಪ್ಪ ಅವರ ಸತತ ಪ್ರಯತ್ನದಿಂದ ಡಯಾಲಿಸಿಸ್‌ ಘಟಕ ಸ್ಥಾಪಿಸಲಾಗಿತ್ತು. ಸಾರ್ವಜನಿಕ ಆಸ್ಪತ್ರೆಯಿಂದಲೇ ವಿದ್ಯುತ್‌ ಹಾಗೂ ನೀರನ್ನು ಪೂರೈಕೆ ಮಾಡಲಾಗಿದ್ದು, ಖಾಸಗಿ ಕಂಪನಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಸುಮಾರು 16 ಜನ ಡಯಾಲಿಸಿಸ್‌ ರೋಗಿಗಳಿದ್ದು, ದಿನಕ್ಕೆ ಮೂರು ಶಿಫ್ಟ್‌ನಲ್ಲಿ ಎರಡು ಯಂತ್ರಗಳಿಂದ 6 ಜನರಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು. ಘಟಕದಲ್ಲಿ ಡಯಾಲಿಸಿಸ್‌ ಯಂತ್ರಕ್ಕೆ ನೀರು ಪೂರೈಸುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ರೋಗಿಗಳು ನೆರೆಯ ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆ ಅವಲಂಬಿಸುವಂತಾಗಿದೆ.

ಸ್ಪಂದಿಸದ ವೈದ್ಯರು: ತಾಲೂಕಿನ ಆನವಟ್ಟಿ, ಜಡೆ ಸೇರಿದಂತೆ ಸುತ್ತಲಿನ ಗ್ರಾಮಗಳ ರೋಗಿಗಳು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್‌ ಘಟಕಕ್ಕೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ವಾರದಲ್ಲಿ ಮೂರು ಬಾರಿ ಆಗಮಿಸುವ ರೋಗಿಗಳಿಗೆ ನಾಲ್ಕು ಗಂಟೆ ಡಯಾಲಿಸಿಸ್‌ ಮಾಡಬೇಕು. ಆದರೆ, ಪ್ರಸ್ತುತ ಮೂರು ಗಂಟೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 30 ಕಿ.ಮೀ. ದೂರದಿಂದ ಆಗಮಿಸುವ ರೋಗಿಗಳು ದಿನವಿಡೀ ಇದೇ ಕಾರ್ಯದಲ್ಲಿ ತೊಡಗಬೇಕಿದೆ. ಇನ್ನು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ಡಯಾಲಿಸಿಸ್‌ ಘಟಕದ ಸಿಬ್ಬಂದಿ ನಡುವೆ ಸಮನ್ವಯತೆ ಕೊರತೆ ಇರುವುದರಿಂದ ಹೈರಾಣಾಗಿ ಹೋಗಿದ್ದೇವೆ ಎನ್ನುತ್ತಾರೆ ಡಯಾಲಿಸಿಸ್‌ ರೋಗಿ ಭೀಮಪ್ಪ.

ಡಯಾಲಿಸಿಸ್‌ ಘಟಕ ಇನ್ನೆರಡು ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಪ್ರಸ್ತುತ ರೋಗಿಗಳಿಗೆ ಸಮಸ್ಯೆಯಾಗದಿರಲಿ ಎಂದು ಶಿಕಾರಿಪುರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಖಾಸಗಿ ಕಂಪನಿಯವರ ಗಮನಕ್ಕೆ ತರಲಾಗಿದ್ದು, ರಿಪೇರಿ ಕಾರ್ಯ ನಡೆಯುತ್ತಿದೆ. ಇದರ ಜೊತೆಯಲ್ಲಿ ಆರ್‌ಒ ಪ್ಲಾಂಟ್‌ ಸಹ ಶಿಫ್ಟ್‌ ಮಾಡುವ ಕಾರ್ಯವೂ ನಡೆಯುತ್ತಿದೆ.
ಡಾ| ಶ್ವೇತಾ,
ಆಡಳಿತ ವೈದ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next