ಎಚ್.ಕೆ.ಬಿ. ಸ್ವಾಮಿ
ಸೊರಬ: ಕಾಡಂಚಿನಲ್ಲಿರುವ ಜಮೀನುಗಳಲ್ಲಿ ಬೆಳೆ ರಕ್ಷಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲು. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಮಂಗಗಳ ಕಾಟದಿಂದ ಬೆಳೆ ಕಾಪಾಡಿಕೊಳ್ಳೋದು ಸುಲಭದ ಮಾತಲ್ಲ. ಹೀಗಾಗಿ ತಾಲೂಕಿನ ಕಕ್ಕರಸಿ ಗ್ರಾಮದ ರೈತರೊಬ್ಬರು ಈಗ ಫ್ಲೆಕ್ಸ್ ಮತ್ತು ಸ್ಪೀಕರ್ (ಧ್ವನಿ ವರ್ಧಕ) ಮೊರೆ ಹೋಗಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಮಂಗಗಳ ಹಾವಳಿಯಿಂದ ಕೊಂಚವೂ ಬೆಳೆ ಲಭಿಸದೇ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು. ಇದಕ್ಕೆ ಹೊಸ ಮಾರ್ಗ ಕಂಡುಕೊಂಡ ಮೂಲತಃ ಜೇಡಗೇರಿ ಗ್ರಾಮದ ಜೆ.ಎಸ್. ಚಿದಾನಂದ ಗೌಡ, ಸ್ಪೀಕರ್‌ಗಳ ಮೊರೆ ಹೋಗಿ ಸುಮಾರು 4ಎಕರೆ ಭೂ ಪ್ರದೇಶದಲ್ಲಿ ಬೆಳೆದ ಬೆಳೆಗಳನ್ನು ರಕ್ಷಣೆ ಮಾಡಿಕೊಂಡಿರುವ ಜತೆಗೆ ನೆರೆಯ ಜಮೀನುಗಳು ಮಂಗಗಳ ಹಾವಳಿಯಿಂದ ವಿಮುಕ್ತಿ ಹೊಂದಿವೆ.
ಬೆಳೆ ರಕ್ಷಣೆಗೆ ಸ್ಪೀಕರ್ ಮೊರೆ: ನೀರಾವರಿ ಸೌಲಭ್ಯವಿಲ್ಲದೇ ಮಳೆಯನ್ನೇ ನಂಬಿ ಕಷ್ಟಪಟ್ಟು ಬೆಳೆದ ಜೋಳದ ಬೆಳೆ ಮಂಗಗಳ ಪಾಲಾಗುತ್ತಿತ್ತು. ಮಂಗಗಳು ಜಮೀನಿಗೆ ಲಗ್ಗೆ ಇಡುವುದನ್ನು ತಪ್ಪಿಸಲು ಸ್ಪೀಕರ್ ಜೋಡಿಸಿದರೇ ಹೇಗೆ ಎಂಬ ಉಪಾಯ ಹೊಳೆದಿದ್ದೇ ಸರಿ. ತಾವೇ ಸ್ಪತಃ ಕೂಗುವ ಮತ್ತು ನಾಯಿಗಳು ಬೊಗಳುವ ಶಬ್ದವನ್ನು ಮೊಬೈಲ್‌ನಲ್ಲಿ ಧ್ವನಿ ಮುದ್ರಿಸಿಕೊಂಡು, ಮೈಕ್ರೋ ಚಿಪ್ ಮೂಲಕ ಸ್ಪೀಕರ್‌ಗಳಿಗೆ ಅಳವಡಿಸಿ, ಜೋಳದ ಸಾಲಿನಲ್ಲಿ ಮರೆಮಾಚಿದಂತೆ ಅಳವಡಿಸಲಾಗಿದೆ. ಜತೆಗೆ ಜಮೀನಿನ ಸುತ್ತ ನಾಯಿ, ಹುಲಿಯ ಫ್ಲೆಕ್ಸ್‌ಗಳನ್ನು ಹಾಕಿದ್ದಾರೆ. ಇತ್ತ ನಾಯಿ ಕೂಗುವ ಶಬ್ದ ಕೇಳಿದ್ದೇ ತಡ ಮಂಗಗಳು ಕಾಲ್ಕಿತ್ತು, ಪುನಃ ಕಾಡು ಸೇರುತ್ತಿದ್ದು, ಇದರಿಂದ ಬೆಳೆ ರಕ್ಷಣೆ ಸಾಧ್ಯವಾಗಿದೆ ಎನ್ನುತ್ತಾರೆ ರೈತ ಚಿದಾನಂದ ಗೌಡ.
ಅರಣ್ಯ ಇಲಾಖೆಯಿಂದ ಪರಿಹಾರ: 2018ನೇ ಸಾಲಿನಲ್ಲಿ ಕಾಡುಕೋಣಗಳ ಹಾವಳಿಯಿಂದ 4 ಎಕರೆ ಜಮೀನಿನಲ್ಲಿ ಬೆಳೆದ ಜೋಳದ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು. ಈ ಸಂಬಂಧ ಅರಣ್ಯ ಇಲಾಖೆಗೆ ದೂರನ್ನು ಸಹ ಸಲ್ಲಿಸಲಾಗಿತ್ತು. ಸ್ಪಂದಿಸಿದ ಇಲಾಖಾ ಅಧಿಕಾರಿಗಳು ಸುಮಾರು 19 ಸಾವಿರ ರೂ., ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು ಎಂಬುದು ಗಮನಾರ್ಹ ಸಂಗತಿ.
ಕಡಿಮೆ ಖರ್ಚಿನಲ್ಲಿ ಯಶಸ್ಸು: ಬೆಳೆ ರಕ್ಷಣೆಗಾಗಿ ಅಳವಡಿಸಿದ ಸ್ಪೀಕರ್, ಮೈಕ್ರೋಚಿಪ್, ವೈರ್ ಸೇರಿ ಇತರೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ತಗುಲಿದ ವೆಚ್ಚ ಕೇವಲ 2 ಸಾವಿರ ರೂ., ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಟದಿಂದ ಕೆಲವೊಮ್ಮೆ ಸ್ಪೀಕರ್ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ಬ್ಯಾಟರಿಯನ್ನು ಸಹ ಅಳವಡಿಸಿದ್ದರಿಂದ ವಿದ್ಯುತ್ ಇಲ್ಲದ ಸಮಯದಲ್ಲೂ ಸ್ಪೀಕರ್ ಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆಯಾಗಿ ಜಮೀನಿನಲ್ಲಿ ಸ್ಪೀಕರ್ ಅಳವಡಿಕೆಯಿಂದ ಮಂಗಗಳು ಸೇರಿ ಇತರೆ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಯಾಗಿದೆ.