Advertisement

ಮುಂದುವರಿದ ಉಗ್ರ ದಮನ; ಕಾಶ್ಮೀರದಲ್ಲಿ ಮೂವರು ಲಷ್ಕರ್‌ ಉಗ್ರರ ಹತ್ಯೆ

06:30 AM Aug 06, 2017 | Team Udayavani |

ನವದೆಹಲಿ/ಇಸ್ಲಾಮಾಬಾದ್‌: ಕಣಿವೆ ರಾಜ್ಯದಲ್ಲಿ ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಸೇನೆ ಶನಿವಾರ ಮತ್ತೆ ಮೂವರು ಲಷ್ಕರ್‌ ಉಗ್ರರನ್ನು ಸದೆಬಡಿದಿದೆ.

Advertisement

ಜಮ್ಮು-ಕಾಶ್ಮೀರದಲ್ಲಿ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳು ಇತ್ತೀಚೆಗಷ್ಟೇ ಲಷ್ಕರ್‌ನ ಮುಖ್ಯ ಕಮಾಂಡರ್‌ ಅಬು ದುಜಾನಾ, ಆರಿಫ್ ಭಟ್‌ ಸೇರಿದಂತೆ ಪ್ರಮುಖ ಉಗ್ರರನ್ನು ಹತ್ಯೆಗೈದಿತ್ತು. ಇದೀಗ ಶನಿವಾರ ಸೋಪೋರ್‌ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್‌ನ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಅಷ್ಟೇ ಅಲ್ಲ, ಮೃತ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೋಪೋರ್‌ನ ಅಮರ್‌ಗಢ ಪ್ರದೇಶದಲ್ಲಿ ಉಗ್ರರು ಅವಿತಿರುವ ಬಗ್ಗೆ ಸುಳಿವು ಸಿಕ್ಕಿದೊಡನೆ ದಾಳಿ ನಡೆಸಿದ ಸೇನೆಯು ಉಗ್ರರಿಗೆ ಶರಣಾಗುವಂತೆ ಸೂಚಿಸಿತು. ಆದರೆ, ಅದಕ್ಕೆ ಬಗ್ಗದ ಉಗ್ರರು ಒಂದೇ ಸಮನೆ ಗುಂಡಿನ ದಾಳಿ ಆರಂಭಿಸಿದರು. ಕೂಡಲೇ ಅವರಿಗೆ ತಕ್ಕ ಪ್ರತಿಕ್ರಿಯೆ ನೀಡಿ, ಸದೆಬಡಿಯಲಾಯಿತು ಎಂದು 52 ರಾಷ್ಟ್ರೀಯ ರೈಫ‌ಲ್ಸ್‌ನ ಕಮಾಂಡಿಂಗ್‌ ಅಧಿಕಾರಿ ರಾಜೇಶ್ವರ್‌ ಜಮಾÌಲ್‌ ಹೇಳಿದ್ದಾರೆ. ಕಾರ್ಯಾಚರಣೆ ವೇಳೆ ಯೋಧರೊಬ್ಬರು ಗಾಯಗೊಂಡಿದ್ದಾರೆ.

ಎನ್‌ಕೌಂಟರ್‌ ಮುಗಿದೊಡನೆ ಮುಂಜಾಗ್ರತಾ ಕ್ರಮವಾಗಿ ಬಾರಾಮುಲ್ಲಾದಲ್ಲಿ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಶೋಪಿಯಾನ್‌ ಜಿಲ್ಲೆಯಲ್ಲಿ ಅಡಗಿಕುಳಿತಿದ್ದ ಮೂವರು ಲಷ್ಕರ್‌ ಉಗ್ರರನ್ನು ಶನಿವಾರ ಬಂಧಿಸಲಾಗಿದೆ. ಪೊಲೀಸ್‌ ಠಾಣೆಗಳ ಮೇಲೆ ಗ್ರೆನೇಡ್‌ ದಾಳಿ ನಡೆಸಲು, ಭದ್ರತಾ ಪಡೆಗಳ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳಲು ನಮಗೆ ಉಗ್ರ ವಾಸಿಂ ಶಾ ಸೂಚಿಸಿದ್ದ ಎಂದು ಇವರು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

ಉಗ್ರ ಹುತಾತ್ಮ ಎಂದ ಅಲ್‌ಖೈದಾ
ಇತ್ತೀಚೆಗೆ ಭದ್ರತಾ ಪಡೆಯ ಎನ್‌ಕೌಂಟರ್‌ಗೆ ಬಲಿಯಾದ ಲಷ್ಕರ್‌ ಕಮಾಂಡರ್‌ ಅಬು ದುಜಾನಾನನ್ನು “ಇಸ್ಲಾಮಿಕ್‌ ಕಾಶ್ಮೀರದ ಯುದ್ಧದ ಮೊದಲ ಹುತಾತ್ಮ’ ಎಂದು ಅಲ್‌ಖೈದಾ ಬಣ್ಣಿಸಿದೆ. ಈ ಕುರಿತ ವಿಡಿಯೋವೊಂದು ಬಹಿರಂಗವಾಗಿದ್ದು, ಅದು ಕಾಶ್ಮೀರದಲ್ಲಿನ ಅಲ್‌ಖೈದಾ ಘಟಕದ ಮುಖ್ಯಸ್ಥ ಝಾಕೀರ್‌ ಮೂಸಾನ ಧ್ವನಿ ಎಂದು ಹೇಳಲಾಗಿದೆ. ದುಜಾನಾ ಸಾವು ಭಾರತದಲ್ಲಿ ಅಲ್‌ಖೈದಾ ಘಟಕವನ್ನು ಸ್ಥಾಪಿಸಲು ನೆರವಾಗಲಿದೆ ಎಂದೂ ಹೇಳಿದ್ದಾನೆ ಮೂಸಾ.

Advertisement

ಉಗ್ರ ಹಫೀಜ್‌ನಿಂದ ಹೊಸ ರಾಜಕೀಯ ಪಕ್ಷ?
26/11ರ ಮುಂಬೈ ದಾಳಿ ಮಾಸ್ಟರ್‌ವೆುçಂಡ್‌, ಜಮಾತ್‌ ಉದ್‌ ದಾವಾ ಉಗ್ರ ಹಫೀಜ್‌ ಸಯೀದ್‌ ಇದೀಗ ಪಾಕಿಸ್ತಾನದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾಗಿದ್ದಾನೆ. ತನ್ನ ಸಂಘಟನೆ ಜೆಯುಡಿಯನ್ನು ರೀಬ್ರಾಂಡ್‌ ಮಾಡಿ “ಮಿಲ್ಲಿ ಮುಸ್ಲಿಂ ಲೀಗ್‌ ಪಾಕಿಸ್ತಾನ್‌’ ಎಂಬ ಹೆಸರಿನ ಪಕ್ಷ ಸ್ಥಾಪಿಸಲು ಸಯೀದ್‌ ನಿರ್ಧರಿಸಿದ್ದಾನೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲ, 2018 ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಯೀದ್‌ ಈಗಾಗಲೇ ತನ್ನ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಕೊಂಡಿದ್ದಾನೆ. ಇದೇ ತಿಂಗಳ 14ರಂದು ಅಂದರೆ ಪಾಕ್‌ ಸ್ವಾತಂತ್ರ್ಯ ದಿನದಂದು ಪಕ್ಷಕ್ಕೆ ಲಾಹೋರ್‌ನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ ಎಂದೂ ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next