Advertisement

ಸುಸಂಸ್ಕೃತ ಸಮಾಜವೇ ಸಾಹಿತ್ಯ ರಚನೆ ಧ್ಯೇಯ; ಡಾ|ಶಂಭು ಬಳಿಗಾರ

06:14 PM Mar 28, 2022 | Team Udayavani |

ದಾವಣಗೆರೆ: ಯುವ ಜನಾಂಗ ಸಭ್ಯ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕನ್ನಡ ಸಾಹಿತ್ಯದ ಅರಿವಿನೊಂದಿಗೆ ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಡಾ| ಶಂಭು ಬಳಿಗಾರ ಮನವಿ ಮಾಡಿದರು. ಎಲೆಬೇತೂರು ಗ್ರಾಮದಲ್ಲಿ ಭಾನುವಾರದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ನುಡಿಗಳಾಡಿದರು.

Advertisement

ಈಗಿನ ವಾತಾವರಣದಲ್ಲಿ ಸಭ್ಯ ಸಮಾಜದ ನಿರ್ಮಾಣ ದ ತೀರಾ ಅಗತ್ಯತೆ ಇದೆ. ಹಾಗಾಗಿ ಯುವ ಜನಾಂಗ ಕನ್ನಡ ಸಾಹಿತ್ಯದ ಪರಂಪರೆಯ ಅರಿವಿನೊಂದಿಗೆ ಸಾಹಿತ್ಯ ರಚನೆ ಮಾಡಬೇಕು. ಕನ್ನಡ ಸಾಹಿತ್ಯ ಪರಂಪರೆಯ ಅರಿವು ಇಲ್ಲದೆ ಹೋದರೆ ಅನಾಹುತ ಆಗುತ್ತದೆ. ಯುವಕರು, ಯುವತಿಯರು ಸಭ್ಯ ಸಮಾಜದ ನಿರ್ಮಾಣದ ಛಲ ಮತ್ತು ಪಣ ತೊಡಬೇಕು ಎಂದು ತಿಳಿಸಿದರು.

ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಮನೆಗಳಲ್ಲಿ ದನ ಕರು ಆಕಳು ಇರುತ್ತಿದ್ದವು. ಒಂದು ಮನೆಯಲ್ಲಿ ಅರ್ಧ ಭಾಗ ಜನರು, ಇನ್ನೊಂದು ಅರ್ಧ ದನಕರು ಇರುತ್ತಿದ್ದವು. ಆಕಳು ನೀಡುತ್ತಿದ್ದ ಹಾಲು, ತುಪ್ಪ, ಮೊಸರು ಯಥೇತ್ಛವಾಗಿ ಬಳಕೆ ಮಾಡುತ್ತಿದ್ದರು. ಆದರೆ, ಈಗ ದನ ಕರು ಆಕಳು ಯಾವುದೂ ಇಲ್ಲ. ಮನೆಯಲ್ಲಿ ಎಮ್ಮೆ ಇದ್ದರೂ ಅವು ಬ್ಯಾಂಕ್‌ ನಿಂದ ಸಾಲ ಪಡೆದಂತಹವು. ಅಂತಹ ವಾತಾವರಣ ಇದೆ. ಹಾಲು ಬಳಕೆ ಮಾಡದೆ ಡೈರಿಗೆ ಮಾರಾಟ ಮಾಡಿಕೊಂಡು ಬರುತ್ತಿದ್ದೇವೆ. ಅಮೃತ ಮಾರಿ ವಿಷ ಕುಡಿಯುವ ದಾರುಣ ಸ್ಥಿತಿ ಇದೆ ಎಂದು ವಿಷಾದಿಸಿದರು.

ಕನ್ನಡ ಸಾಹಿತ್ಯ ನೋಡಲಿಕ್ಕೂ ಬಹಳ ಚೆನ್ನಾಗಿ ಇರುತ್ತದೆ. ಅಂತೆಯೇ ಪ್ರತಿಯೊಬ್ಬರು ಹೀಗೆ ಬಾಳಬೇಕು ಎಂಬ ಜೀವನಮೌಲ್ಯ, ಮಾನವೀಯ ಸಂದೇಶಗಳಿವೆ ಎಂದು ತಿಳಿಸಿದರು. ಇಂದಿನ ವಾತಾವರಣದಲ್ಲಿ ಅನ್ನದಾತರು ಬೀಜ, ಗೊಬ್ಬರ ಖರೀದಿಸಿ ತಂದು ಕೃಷಿ ಚಟುವಟಿಕೆ ನಡೆಸುತ್ತಿದ್ದೇವೆ. ಒಟ್ಟಾರೆ ನಮ್ಮ ಅಸ್ತಿತ್ವವನ್ನೆ ಕಳೆದುಕೊಳ್ಳುತ್ತಿದ್ದೇವೆ. ನಮ್ಮತನವೇ ಕಳೆದು ಹೋಗುತ್ತಿದೆ. ಸ್ವಾವಲಂಬಿ ಆಗಿದ್ದವರು ಪರಾವಲಂಬಿ ಆಗುತ್ತಿದ್ದೇವೆ. ಒಬ್ಬೊಬ್ಬರು ನಡುಗಡ್ಡೆಯಂತಾಗಿದ್ದೇವೆ. ಸ್ವಾರ್ಥಿಗಳಾಗುತ್ತಿದ್ದೇವೆ. ಇಂತಹ ದಾರುಣ ಸ್ಥಿತಿಯ ನಡುವೆ ಆಶಾಕಿರಣವಾಗಿ ಕಂಡು ಬರುವ ಯುವ ಜನಾಂಗ ಸಭ್ಯ ಸಮಾಜದ ನಿರ್ಮಾಣಕ್ಕಾಗಿ ಕನ್ನಡ ಸಾಹಿತ್ಯದ ಪರಂಪರೆಯ ಅರಿವಿನಿಂದ ಲೇಖನಿ ಎತ್ತಬೇಕೆಂದು ಮನವಿ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ
ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿತು. ಗ್ರಾಮೀಣ ಭಾಗದಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ
ಸಮ್ಮೇಳನವನ್ನೂ ಅತ್ಯಂಯ ಯಶಸ್ವಿಯಾಗಿ ನಡೆಸ ಬಹುದು ಎಂಬುದಕ್ಕೆ ಎಲೆಬೇತೂರು ಗ್ರಾಮದಲ್ಲಿ ಎರಡು ದಿನ ನಡೆದ ಸಾಹಿತ್ಯ ಸಮ್ಮೇಳನ ಜ್ವಲಂತ ನಿದರ್ಶನ. ಕಳೆದ 15 ದಿನಗಳ ಹಿಂದೆಯಷ್ಟೇ ಸಾಹಿತ್ಯ ಸಮ್ಮೇಳನವನ್ನ ಎಲೆಬೇತೂರಿನಲ್ಲಿ ನಡೆಸಲು ನಿರ್ಣಯಿಸಲಾಯಿತು. ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಂತ ಕಾರ್ಯಕ್ರಮಕ್ಕೆ ಕಾಲಾವಕಾಶ ಕಡಿಮೆ ಇದ್ದರೂ ಗ್ರಾಮದ ಮುಖಂಡರು, ಯುವಕರು. ಕನ್ನಡದ ಮನಗಳ ಸಾಂಘಿಕ ಪ್ರಯತ್ನದಿಂದ ಎರಡು ದಿನಗಳ ಸಮ್ಮೇಳನ ಬಹಳ ಅಚ್ಚುಕಟ್ಟು, ಸಾಂಗವಾಗಿ ಸಂಪನ್ನಗೊಂಡಿತು.

Advertisement

ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಜಿಲ್ಲೆಯ ಹಿರಿಯ ಸಾಹಿತಿ ಜಿ.ಎಸ್‌. ಸುಶೀಲಾದೇವಿ ಆರ್‌. ರಾವ್‌, ಸರ್ವಾಧ್ಯಕ್ಷತೆಯ ಭಾಷಣದಲ್ಲಿ ಎಲೆಬೇತೂರು ಗ್ರಾಮಸ್ಥರ ಕನ್ನಡಾಭಿಮಾನವನ್ನ ಮನಸಾರೆ ಕೊಂಡಾಡಿದರು. ವೇದಿಕೆ, ಮೆರವಣಿಗೆ, ಊಟ..ಎಲ್ಲಿಯೂ ಯಾವುದೇ ಚ್ಯುತಿ ಬರದಂತೆ ಸಮ್ಮೇಳನ ನಡೆಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.

ಸಮ್ಮೇಳನದ ಸಮಾರೋಪ ನುಡಿಗಳಾಡಿದ ನಾಡಿನ ಹಿರಿಯ ಸಾಹಿತಿ ಡಾ| ಶಂಭು ಬಳಿಗಾರ್‌, ಹೀಗೂ ಜಿಲ್ಲಾ ಮಟ್ಟದ ಕನ್ನಡದ ಹಬ್ಬವನ್ನ ಮಾಡಬಹುದು ಎಂಬುದನ್ನು ಎಲೆಬೇತೂರು ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ. ಮಧ್ಯಾಹ್ನದ ಊಟದ ಸಮಯದಲ್ಲಿ ಗ್ರಾಮಸ್ಥರು ತೋರಿದ ಅಭಿಮಾನ, ಪ್ರೀತಿ ಅವಿಸ್ಮರಣೀಯ. ಬಾಲ್ಯದಲ್ಲಿ ಗ್ರಾಮಗಳಲ್ಲಿ ಕಂಡು ಬರುತ್ತಿದ್ದ ಆತ್ಮೀಯತೆಯ ವಾತಾವರಣವನ್ನ ಮತ್ತೆ ಕಟ್ಟಿಕೊಟ್ಟಿತು. ಗ್ರಾಮೀಣ ಭಾಗದಲ್ಲಿ ಇಂತಹ ಕನ್ನಡ ಸಮ್ಮೇಳನ ಹೆಚ್ಚಾಗಿ ನಡೆಯಬೇಕು. ಹೇಗೆ ನಡೆಯಬೇಕು ಎಂಬುದಕ್ಕೆ ಎಲೆಬೇತೂರು ಉದಾಹರಣೆ ಆಗಿದೆ ಎಂದರು.

ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಬಿ. ಕರಿಬಸಪ್ಪ, ತಾಲೂಕು ಪಂಚಾಯತ್‌ ಮಾಜಿ ಉಪಾಧ್ಯಕ್ಷ ಬಿ.ಜಿ. ಸಂಗನ ಗೌಡ್ರು, ಕಾಡಾ ಸಮಿತಿ ಸದಸ್ಯ ಬೇತೂರು ಬಸವರಾಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬೇತೂರು ಪ್ರಭು, ಗ್ರಾಮ ಪಂಚಾಯತ್‌ ಅಧ್ಯಕ್ಷೆ ಕೆ.ಸಿ. ಸುಮಾ ಬಿ. ವಿರೂಪಾಕ್ಷಪ್ಪ, ಮರಡಿ ಅಶೋಕ್‌ ಅವರ ನೇತೃತ್ವದ ಪ್ರತಿಯೊಬ್ಬರು ಸಮ್ಮೇಳನದ ಯಶಸ್ಸಿನ ರೂವಾರಿಗಳು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು, ಕನ್ನಡ ಪರ ಸಂಘಟನೆ, ವಿವಿಧ ಇಲಾಖೆಯವರು ಸಮ್ಮೇಳನದ ಯಶಸ್ವಿಗೆ ಶ್ರಮಿಸಿದರು.

ಸಮ್ಮೇಳನದ ನಿರ್ಣಯಗಳು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಖಜಾಂಕಿ ಕೆ. ರಾಘವೇಂದ್ರ ನಾಯರಿ ನಿರ್ಣಯ ಮಂಡಿಸಿದರು. ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಚನ್ನಗಿರಿ ತಾಲೂಕಿನ ಅಧ್ಯಕ್ಷ ಎಲ್‌.ಜಿ. ಮಧುಕುಮಾರ್‌, ಬಿ. ದಿಳೆಪ್ಪ, ಡಿ.ಎಂ. ಹಾಲಾರಾಧ್ಯ, ಡಿ.ಎಂ. ಮಂಜುನಾಥಯ್ಯ, ಜಿ. ಮುರುಗೆಪ್ಪಗೌಡ, ಕೆ. ಸುಜಾತಮ್ಮ ಇತರರು ಇದ್ದರು. ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

* ಮುಂದಿನ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲೇ ನಡೆಸಬೇಕು
* ದಾವಣಗೆರೆಯಲ್ಲಿ ಎಫ್‌ಎಂ ರೇಡಿಯೋ ಕೇಂದ್ರ ಆರಂಭಿಸಬೇಕು.
* ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡುವ ದೃಷ್ಟಿಯಿಂದ ಯುವಕರಿಗೆ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕು.
* ಈ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಸಿದ್ಧ ಉಡುಪುಗಳ ತಯಾರಿಕೆಗೆ ವಿಶೇಷ ಆರ್ಥಿಕ ವಲಯ, ತಂತ್ರಜ್ಞಾನ ಪಾರ್ಕ್‌ಗಳ ಸ್ಥಾಪನೆಗೆ ಅವಕಾಶ ಕಲ್ಪಿಸಬೇಕು.
* ನಾಡಿನ ಮಧ್ಯ ಭಾಗದಲ್ಲಿರುವ ದಾವಣಗೆರೆಯಲ್ಲಿ ಪೂರ್ಣ ಪ್ರಮಾಣದ ವಿಮಾನ ನಿಲ್ದಾಣ ನಿರ್ಮಿಸುವ ಮೂಲಕ ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು.
* ಕೃಷಿ ಪ್ರಧಾನವಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಭತ್ತ, ರಾಗಿ, ಜೋಳ, ಅಡಕೆ, ಬಾಳೆ ಮುಂತಾದ ಬೆಳೆಗಳಿಗೆ ಪೂರಕವಾಗಿ ಸಂಶೋಧನೆಗೆ ಗುಣವಾಗುವಂತೆ ಕೃಷಿ ಮತ್ತು ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಕ್ರಮ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next