ವೆಲ್ಲಿಂಗ್ಟನ್: ಆಲ್‌ರೌಂಡರ್ ಸೋಫಿ ಡಿವೈನ್ ನ್ಯೂಜಿಲ್ಯಾಂಡ್ ವನಿತಾ ಕ್ರಿಕೆಟ್ ತಂಡದ ನೂತನ ಹಾಗೂ ಪೂರ್ಣಾವಧಿಯ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಅವರು ಆ್ಯಮಿ ಸ್ಯಾಟರ್‌ವೈಟ್ ಅವರ ಉತ್ತರಾಧಿಕಾರಿಯಾಗಿದ್ದಾರೆ. ಸದ್ಯ ಹೆರಿಗೆ ರಜೆಯಲ್ಲಿರುವ ಸ್ಯಾಟರ್‌ವೈಟ್, ಬಳಿಕ ತಂಡದ ಉಪನಾಯಕಿಯಾಗಿ ಮುಂದುವರಿಯಲಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಸೋಫಿ ಡಿವೈನ್ ಕಳೆದ ಋತುವಿನಲ್ಲಿ ನ್ಯೂಜಿಲ್ಯಾಂಡ್ ತಂಡದ ಉಸ್ತುವಾರಿ ನಾಯಕಿಯಾಗಿದ್ದರು. ಅವರ ಪ್ರಬಲ ನಾಯಕತ್ವ ಗುಣ ಎನ್ನುವುದು ಪೂರ್ಣಾವಧಿಯ ಹುದ್ದೆಗೆ ಹಾದಿ ಕಲ್ಪಿಸಿತು.
“ನ್ಯೂಜಿಲ್ಯಾಂಡ್ ತಂಡದ ಪೂರ್ಣಾವಧಿಯ ನಾಯಕಿ ಎನ್ನುವುದು ನನ್ನ ಪಾಲಿನ ಮಹಾನ್ ಗೌರವ. ಕಳೆದ ಋತುವಿನಲ್ಲಿ ಈ ಜವಾಬ್ದಾರಿಯನ್ನು ಆನಂದಿಸಿದ್ದೇನೆ. ಫಲಿತಾಂಶದ ಹಿನ್ನೆಲೆಯಲ್ಲಿ ಇದೊಂದು ಸವಾಲಿನ ಕೆಲಸ.
ಆದರೆ ತಂಡ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ ಎಂಬುದು ಖುಷಿ ಕೊಡುವ ವಿಚಾರ’ ಎಂಬುದಾಗಿ ಸೋಫಿ ಡಿವೈನ್ ಪ್ರತಿಕ್ರಿಯಿಸಿದ್ದಾರೆ.
30 ವರ್ಷದ ಸೋಫಿ ಡಿವೈನ್ ನ್ಯೂಜಿಲ್ಯಾಂಡ್ ಪರ 105 ಏಕದಿನ ಹಾಗೂ 91 ಟಿ20 ಪಂದ್ಯಗಳನ್ನಾಡಿದ್ದಾರೆ. ಒಟ್ಟು 4,954 ರನ್ ಮತ್ತು 158 ವಿಕೆಟ್ ಸಂಪಾದಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ನ್ಯೂಜಿಲ್ಯಾಂಡ್ ವನಿತಾ ತಂಡ ಮುಂದಿನ ವಾರದಿಂದ ಲಿಂಕನ್‌ನಲ್ಲಿ ಅಭ್ಯಾಸ ಆರಂಭಿಸಲಿದೆ.