ಮುಂಬೈ : ಇಲ್ಲಿನ ಬ್ರಬೋರ್ನ್ ಸ್ಟೇಡಿಯಂ ನಲ್ಲಿ ಶನಿವಾರ ನಡೆದ ವನಿತಾ ಪ್ರೀಮಿಯರ್ ಲೀಗ್ ನ ರೋಚಕ ಪಂದ್ಯದಲ್ಲಿ ಆರ್ ಸಿಬಿ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ ಸ್ಪೋಟಕ ಆಟ ಪ್ರದರ್ಶಿಸಿ ಶತಕದ ಹೊಸ್ತಿಲಲ್ಲಿ ಎಡವಿ ಭಾರಿ ನಿರಾಸೆ ಅನುಭವಿಸಿದರು.8 ವಿಕೆಟ್ ಗಳ ಅಮೋಘ ಜಯದೊಂದಿಗೆ ಆಡಿದ ಆರು ಪಂದ್ಯಗಳಲ್ಲಿ ಎರಡನೇ ಸ್ಮರಣೀಯ ಜಯವನ್ನು ತನ್ನದಾಗಿಸಿಕೊಂಡಿತು.
ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಗುಜರಾತ್ ಜೈಂಟ್ಸ್ ಬೌಲರ್ ಗಳನ್ನು ದಂಡಿಸಿದ ಸೋಫಿ 36 ಎಸೆತಗಳಲ್ಲಿ 9 ಬೌಂಡರಿ ಮತ್ತು 8 ಆಕರ್ಷಕ ಸಿಕ್ಸರ್ ಸಿಡಿಸಿದ್ದರು.
99 ರನ್ ಗಳಿಸಿ ಶತಕ ಸಂಭ್ರಮಿಸುತ್ತಾರೆ ಅನ್ನುವ ವೇಳೆಯಲ್ಲೇ ಅಶ್ವನಿ ಕುಮಾರಿ ಎಸೆದ ಚೆಂಡನ್ನು ಕಾಮ್ ಗಾರ್ತ್ ಅವರ ಕೈಗಿತ್ತು ನಿರ್ಗಮಿಸಿದರು.
ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 188ಗಳನ್ನು ಕಲೆ ಹಾಕಿತ್ತು. ಡಂಕ್ಲಿ 16, ವೋಲ್ವಾರ್ಡ್ 68, ಸಬ್ಬಿನೇನಿ ಮೇಘನಾ 31, ಗಾರ್ಡ್ನರ್ 41, ಹೇಮಲತಾ ಔಟಾಗದೆ 16 ಮತ್ತು ಹರ್ಲೀನ್ ಡಿಯೋಲ್ ಔಟಾಗದೆ 12 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಆರ್ ಸಿಬಿ ಆರಂಭದಿಂದಲೂ ಅಬ್ಬರಿಸಿತು. ಸೋಫಿ ಡಿವೈನ್ ಭರ್ಜರಿ ಹೊಡೆತಗಳನ್ನು ಬಾರಿಸುತ್ತಿದ್ದ ವೇಳೆ ನಾಯಕಿ ಸ್ಮೃತಿ ಮಂಧಾನ 37 ರನ್ ಗಳಿಸಿ ಔಟಾದರು. ಎಲ್ಲಿಸ್ ಪೆರ್ರಿ19, ಹೀದರ್ ನೈಟ್ 22 ರನ್ ಗಳಿಸಿ ಅಜೇಯರಾಗಿ ಉಳಿದರು.
15.3 ಓವರ್ ಗಳಲ್ಲಿ2 ವಿಕೆಟ್ ನಷ್ಟಕ್ಕೆ 189 ರನ್ ಗಳ ಗುರಿಯನ್ನು ತಲುಪಿದ ಆರ್ ಸಿಬಿ ಜಯದ ಸಂಭ್ರಮ ಆಚರಿಸಿತು.