ಹೊಸದಿಲ್ಲಿ : ಸದ್ಯದಲ್ಲೇ ಪ್ರಯಾಣಿಕರು ದಿಲ್ಲಿ – ಮುಂಬಯಿ ರೈಲು ಪ್ರಯಾಣವನ್ನು ಕೇವಲ ಹದಿಮೂರು ತಾಸುಗಳಲ್ಲಿ ಮುಗಿಸಲಿದ್ದಾರೆ.
ಅತ್ಯಂತ ದಟ್ಟನೆಯ ರೈಲು ಪ್ರಯಾಣದ ಈ ಮಾರ್ಗದಲ್ಲಿ, ಭಾರತೀಯ ರೈಲ್ವೆ ಕೈಗೊಂಡಿರುವ ಹೊಸ ಕ್ರಮದ ಪರಿಣಾಮವಾಗಿ ದಿಲ್ಲಿ – ಮುಂಬಯಿ ರೈಲು ಪ್ರಯಾಣದ ಅವಧಿಯು ಮೂರು ತಾಸು ಕಡಿಮೆಯಾಗಲಿದೆ. ಹಾಗಾಗಿ ದಿಲ್ಲಿ -ಮುಂಬಯಿಗೆ ಈಗಿನ್ನು ಕೇವಲ ಒಂದು ರಾತ್ರಿ-ಬೆಳಗಿನ ಪ್ರಯಾಣ ಸಾಕಾಗಲಿದೆ.
ಪ್ರಕೃತ ದಿಲ್ಲಿ – ಮುಂಬಯಿ ದೂರವನ್ನು ಕ್ರಮಿಸಲು ರಾಜಧಾನಿ ಎಕ್ಸ್‌ಪ್ರೆಸ್ ಹದಿನಾರು ತಾಸುಗಳ ಅವಧಿಯನ್ನು ತೆಗೆದುಕೊಳ್ಳುತ್ತಿದೆ. ಭಾರತೀಯ ರೈಲ್ವೆ ಉಪಕ್ರಮವಾಗಿ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಲಿಂಕ್ ಹಾಫ್ಮನ್ ಬಾಶ್ (ಎಲ್‌ಎಚ್‌ಬಿ) ಕೋಚ್‌ಗಳನ್ನು ಬಳಸಲಾಗಿ ಇದೀಗ ಅದರ ಪ್ರಯಾಣ ವೇಗದ ಫಲಿತಾಂಶವನ್ನು ಪರಿಶೀಲಿಸಲಾಗುತ್ತಿದೆ.
ಗಂಟೆಗೆ 200 ಕಿ.ಮೀ. ವೇಗದಲ್ಲಿ, ಒಂಟಿ ಇಂಜಿನ್‌ನಿಂದ ಎಳೆಯಲ್ಪಡುವ, ಈ ಹೊಸ ಯೋಜನೆಯಲ್ಲಿ ಹದಿನಾಲ್ಕು ಕೋಚ್‌ಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಗಂಟೆಗೆ 180 ಕಿ.ಮೀ.ವೇಗದಲ್ಲಿ ಓಡುವಂತಾಗಿದೆ.
ಈ ಹೊಸ ವ್ಯವಸ್ಥೆಯಲ್ಲಿ ಕೈಗೊಳ್ಳಲಾದ ಲಘು ಪ್ರಯೋಗದಲ್ಲಿ ದಿಲ್ಲಿ – ಮುಂಬಯಿ ಮಾರ್ಗವನ್ನು ಕ್ರಮಿಸಲು ರೈಲು ಹದಿಮೂರು ತಾಸುಗಳನ್ನು ತೆಗೆದುಕೊಂಡಿದೆ. ರೈಲ್ವೇ ಮಂಡಳಿಯ ಸಭೆಯ ಬಳಿಕ ಎರಡನೇ ಗಂಭೀರ ಪ್ರಯೋಗವನ್ನು ಶೀಘ್ರವೇ ಕೈಗೊಳ್ಳಲಾಗುವುದು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.
ದಿಲ್ಲಿ – ಮುಂಬಯಿ ಮಾರ್ಗದಲ್ಲಿನ ಯಶಸ್ಸನ್ನು ಅನುಸರಿಸಿ ಶೀಘ್ರವೇ ದಿಲ್ಲಿ – ಹೌರಾ ಮಾರ್ಗದಲ್ಲೂ ವೇಗದ ರೈಲು ಓಡಾಟ ಆರಂಭಿಸಲಾಗುವುದು ಎಂದು ಮೂಲಗಳು ಹೇಳಿವೆ.