ಬೆಂಗಳೂರು: ವಿದ್ಯುತ್ ಕ್ಷೇತ್ರದಲ್ಲಿ ದೇಶವು ಸ್ವಾವಲಂಬನೆ ಸಾಧಿಸಿದ್ದು, ಯೂರಿಯಾ ಉತ್ಪಾದನೆಯಲ್ಲೂ ದೇಶ ಶೀಘ್ರವೇ ಸ್ವಾವಲಂಬಿ ಆಗಲಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ ನಂತರ ಮಾತನಾಡಿದ ಅವರು, ಮುಂದಿನ ಕೆಲವೇ ತಿಂಗಳುಗಳಲ್ಲಿ ನಾಲ್ಕು ಹೊಸ ರಸಗೊಬ್ಬರ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆ. ಇಫ್ಕೋ ಕಂಪೆನಿಯು ಕರ್ನಾಟಕದಲ್ಲಿ ನ್ಯಾನೊ ಯೂರಿಯಾ ಉತ್ಪಾದನಾ ಘಟಕ ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ರಾಜ್ಯ ಸರ್ಕಾರವು ಮೂಲಸೌಕರ್ಯ ನೀಡಿದ ಬಳಿಕ ಕಾರ್ಯಾರಂಭ ಮಾಡಲಿದೆ ಎಂದರು.
22 ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದೇನೆ. ಅದಕ್ಕಿಂತ ಮೊದಲು ಸಂಘ ಪರಿವಾರದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದಲ್ಲೂ ವಿವಿಧ ಜವಾಬ್ದಾರಿ ನಿರ್ವಹಿಸಿದ್ದೇನೆ. ಈಗ ಹೊಸ ಜವಾಬ್ದಾರಿ ಸಿಕ್ಕಿದ್ದು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿದ್ದೇನೆ.
ಇದನ್ನೂ ಓದಿ:175 ಕೋಟಿ ರೂ.ವೆಚ್ಚದಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಉಮಾಪತಿ
ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 7 ವರ್ಷ ಪೂರೈಸಿದ್ದು, ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದೇವೆ. ಹಿಂದುಳಿದ ಜಾತಿಗಳನ್ನು ಗುರುತಿಸುವ ರಾಜ್ಯಗಳ ಅಧಿಕಾರವನ್ನು ಮರು ಸ್ಥಾಪಿಸುವ ಮಸೂದೆಗೆ ರಾಜ್ಯಸಭೆಯು ಒಪ್ಪಿಗೆ ನೀಡಿದ್ದು, ಇದೊಂದು ಮಹತ್ವದ ಕ್ರಮವಾಗಿದೆ. ರಸ್ತೆ, ರೈಲ್ವೆ, ವಿಮಾನಿಲ್ದಾಣ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಅಭೂತಪೂರ್ವ ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.
ಸಂಸದರಾದ ಪ್ರತಾಪ ಸಿಂಹ, ಎಸ್.ಮುನಿಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ. ಸಂದೀಪ್ ಇದ್ದರು.