ಹಾಸನ: ಜಿಲ್ಲೆಯಲ್ಲಿ ಆ . 2 ರಿಂದ 8ರ ವರೆಗೆ ಸಂಭವಿಸಿದ ಬಿರುಗಾಳಿ ಸಹಿತ ಮಳೆಯಿಂದಾದ ನಷ್ಟದ ಅಂದಾಜು ಮಾಡಲಾಗುತ್ತಿದ್ದು, ಪರಿಹಾರ ಕಾರ್ಯಗಳಿಗೆ ನೆರವು ಕೋರಿ ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗಿನ ಮಾಹಿತಿ ಪ್ರಕಾರ 4460 ಹೆಕ್ಟೇರ್ ಕೃಷಿ ಬೆಳೆಗಳು, 940 ಹೆಕ್ಟೇರ್ ತೋಟಗಾರಿಕೆ ಬೆಳೆಗಳ ಹಾನಿಯಾಗಿದೆ. ಕಾಫಿ ಮತ್ತು ಮೆಣಸು ಬೆಳೆಗೂ ಹಾನಿಯಾಗಿರುವ ವರದಿಯಿದ್ದು, ಕಾಫಿ ಮಂಡಳಿಯು ಇನ್ನೊಂದು ವಾರದಲ್ಲಿ ವರದಿ ನೀಡಲಿದೆ. ಮಂಡಳಿಯ ವರದಿ ಆಧರಿಸಿ ನಷ್ಟದ ಅಂದಾಜು ಮಾಡಿ ಪರಿಹಾರದ ಪ್ರಸ್ತಾವನೆಗೆ ಸೇರಿಸಲಾಗುವುದು ಎಂದರು.
ನೆರವು ನೀಡಲಾಗುವುದು: ಅತಿವೃಷ್ಟಿಯಿಂದ 150 ಕಿ.ಮೀ. ರಸ್ತೆಗಳು, 330 ಮನೆಗಳು, 87 ಶಾಲಾ ಕಟ್ಟಡಗಳು, 32 ಅಂಗನವಾಡಿ ಕಟ್ಟಡಗಳಿಗೆ ಹಾನಿ ಸಂಭವಿಸಿದೆ. ಸಕಲೇಶಪುರ ತಾಲೂಕಿನಲ್ಲಿ 206 ಮನೆಗಳು. ಹಾಸನದಲ್ಲಿ 34 ಮನೆ, ಆಲೂರಿನಲ್ಲಿ 16 ಮನೆಗಳು, ಅರಕಲಗೂಡಿನಲ್ಲಿ 18 ಮನೆಗಳು ಹಾನಿ ಗೀಡಾಗಿದ್ದ, ಇನ್ನುಳಿದ 4 ತಾಲೂಕುಗಳಲ್ಲಿ 56 ಮನೆಗಳಿಗೆ ಹಾನಿ ಸಂಭವಿಸಿದೆ. ಮನೆಗಳ ಹಾನಿಯನ್ನು ಎ ಬಿ ಸಿ ಎಂದು ವರ್ಗೀಕರಿಸಿ ಪರಿಹಾರ ನಿಗದಿಪಡಿಸಲಾಗುವುದು. ಸಂಪೂರ್ಣ ನೆಲಸಮವಾದ ಮನೆಗಳ ಪುನರ್ ನಿರ್ಮಾಣಕ್ಕೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.
ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ: ಮಲೆನಾಡು ಪ್ರದೇಶದಲ್ಲಿ ಮಳೆ ಮತ್ತು ಗಾಳಿಯಿಂದ 700 ರಿಂದ 800 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, 332 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಈಗಾಗಲೇ ಕಂಬಗಳನ್ನು ನೆಟ್ಟು 330 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನುಳಿದ ಗ್ರಾಮಗಳಿಗೆ ಒಂದೆರಡು ದಿನದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಗಾಳಿಯಿಂದಾಗಿ ಹೆಚ್ಚು ಹಾನಿ: ಜಿಲ್ಲೆಯಲ್ಲಿ ಆ.2 ರಿಂದ 8ರ ವರೆಗೆ 6 ದಿನಗಳಲ್ಲಿ ಹೆಚ್ಚು ಮಳೆಯಾಗಿದೆ. ವಾಡಿಕೆ ಮಳೆ 54 ಮಿ.ಮೀ. ಗೆ ಬದಲಾಗಿ 187 ಮಿ.ಮೀ. ಮಳೆಯಾಗಿದ್ದು,ಶೇ.246 ರಷ್ಟು ಹೆಚ್ಚು ಮಳೆ ಸುರಿದಿದೆ. ಸಕಲೇಶಪುರ ತಾಲೂಕಿನಲ್ಲಿ 126 ಮಿ.ಮೀ. ಮಳೆ ಆಗಬೇಕಾಗಿತ್ತು. ಆದರೇ 685 ಮಿ. ಮೀ.ಅಂದರೆ ಶೇ.442 ರಷ್ಟು ಹೆಚ್ಚು ಮಳೆ 6 ದಿನದಲ್ಲಿ ಸುರಿದಿದೆ. ಸಕಲೇಶಪುರ, ಆಲೂರು, ಬೇಲೂರು ತಾಲೂಕಿನಲ್ಲಿ ಹೆಚ್ಚು ಹಾನಿ ಸಂಭವಿಸಿದ್ದರೆ, ಅರಕಲಗೂಡು ತಾಲೂಕಿನ ಕೆಲವು ಭಾಗಗಳಲ್ಲಿ ಹಾನಯಾಗಿದೆ. ಈ ವರ್ಷ ಮಳೆಗಿಂತ ಗಾಳಿಯಿಂದಾಗಿ ಹೆಚ್ಚು ಹಾನಿಯಾಗಿದೆ ಎಂದು ಹೇಳಿದರು.
ರಸ್ತೆಗಳ ದುರಸ್ತಿ ಕಾರ್ಯ ಆರಂಭ: ಡೀಸಿ : ಕಳೆದ ವರ್ಷ 2140 ಮನೆಗಳು ಅತಿವೃಷ್ಟಿಯಿಂದ ಹಾನಿಗೀಡಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈವರೆಗೆ ಆಗಿರುವ ನಷ್ಟದ ಅಂದಾಜು ಮಾಡಿ ಪರಿಹಾರದ ಪ್ರಸ್ತಾವನೆಯನ್ನು ಶೀಘ್ರದಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈಗ ಮಳೆ ಕಡಿಮೆಯಾಗಿದ್ದು, ಸಕಲೇಶಪುರ ತಾಲೂಕಿನಲ್ಲಿ ರಸ್ತೆಗಳ ದುರಸ್ತಿ ಕಾರ್ಯ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಿರೀಶ್‌ಹೇಳಿದರು.