Advertisement

ಶೀಘ್ರದಲ್ಲೇ ಕಾಯಕ ದಾಸೋಹ ಮಂಟಪದ ಕೆಲಸ ಆರಂಭ

05:55 PM Oct 06, 2018 | |

ದಾವಣಗೆರೆ: ಮಠ ಮತ್ತು ಪೀಠ ಎನ್ನುವ ನಾಮಾಂಕಿತಗಳು ಕೆಲವೇ ವರ್ಗಕ್ಕೆ ಸೀಮಿತವಾಗುವ ಕಾರಣ ಎಲ್ಲಾ ಜಾತಿ,
ಧರ್ಮ, ವರ್ಗದವರನ್ನೂ ಸೇರಿಸುವ ಸಲುವಾಗಿ ದಾವಣಗೆರೆಯಲ್ಲಿ ಕಾಯಕ ದಾಸೋಹ ಮಂಟಪ ಅರಂಭಿಸಲಾಗುತ್ತಿದೆ ಎಂದು ಕೂಡಲ ಸಂಗಮದ ಲಿಂಗಾಯುತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

Advertisement

ಶುಕ್ರವಾರ, ನಗರದ ಹೊರ ವಲಯದಲ್ಲಿನ ಬಾಡಾ ಕ್ರಾಸ್‌ ಬಳಿ ಆಯೋಜಿಸಲಾಗಿದ್ದ 135ನೇ ಬಸವ ಸಂಗಮ ಹಾಗೂ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಅಂತರಂಗ ಮತ್ತು ಬಹಿರಂಗ ಎರಡನ್ನೂ ಶುದ್ಧಿ ಮಾಡುವುದು ಅನುಭವ ಮಂಟಪ. ಈ ಕಾಯಕ ಮಂಟಪ ಯಾವುದೇ ಜಾತಿಗೆ ಸೀಮಿತ ಆಗಬಾರದು, ಮಾತ್ರವಲ್ಲ
ಎಲ್ಲಾ ವರ್ಗಕ್ಕೂ ಸೇರಬೇಕು. ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುವ ನಿಟ್ಟಿನಲ್ಲಿ ಶೀಘ್ರವೇ ಸಮಿತಿ ರಚಿಸಿ, ಇದೇ ಸ್ಥಳದಲ್ಲಿ ಕಟ್ಟಡ ಕೆಲಸ ಆರಂಭಿಸಲಾಗುವುದು ಎಂದರು. 

12ನೇ ಶತಮಾನದಲ್ಲಿ ಎಲ್ಲಾ ಶರಣರಿಗಿಂತಲೂ ನಿಷ್ಠುರ ಹಾಗೂ ಕ್ರಾಂತಿಕಾರಿಯಾಗಿ ಕೆಲಸ ಮಾಡಿದಾತ ಮಡಿವಾಳ ಮಾಚಯ್ಯ. ವೀರ ಗಣಾಚಾರಿ ಮಾಚಿದೇವ ಕ್ರಾಂತಿ ಮೂಲಕ ಸಮಾಜ ಸುಧಾರಣೆಗೆ ಮುಂದಾದ ದಿಟ್ಟ ವ್ಯಕ್ತಿ. ಕ್ರಾಂತಿಯ ಮೂಲಕವೇ ಸಮಾಜದಲ್ಲಿನ ಕೆಟ್ಟ ಆಚರಣೆಗಳನ್ನು ಕಿತ್ತೂಗೆದು ಸಮಾನತೆ ಸಂದೇಶ ಸಾರಿ ಕ್ರಾಂತಿಯ ಕಿಡಿಯಾದವರೇ ಮಡಿವಾಳ ಮಾಚಿದೇವ ಎಂದು ಸ್ಮರಿಸಿದರು. 

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಂದ ನಾಶವಾಗಲಿದ್ದ ವಚನ ಸಾಹಿತ್ಯವನ್ನು ರಕ್ಷಿಸಿ, ಇಂದಿಗೂ ನಮಗೆಲ್ಲರಿಗೂ ಸಿಗುವಂತೆ ಮಾಡಿದ್ದು ಮಾಚಿದೇವ. ಇಂದು ಬಸವಣ್ಣ ಸೇರಿದಂತೆ 12ನೇ ಶತಮಾನದ ಶರಣರ ಬಗ್ಗೆ ನಾವು ತಿಳಿದುಕೊಳ್ಳುತ್ತಿದ್ದೇವೆ ಎಂದರೆ ಅದಕ್ಕೆಲ್ಲಾ ಮಾಚಿದೇವರು ಮಾಡಿದ ಹೋರಾಟದ ಫಲವೇ ಕಾರಣ ಎಂದು ಹೇಳಿದರು.

ದೇಶದ 16 ರಾಜ್ಯಗಳಲ್ಲಿ ಮಡಿವಾಳ ಸಮುದಾಯವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆ. ಅಂತೆಯೇ ಕರ್ನಾಟಕದಲ್ಲೂ ಪರಿಶಿಷ್ಟ ರ ಪಟ್ಟಿಗೆ ಸೇರಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸುವುದು ಸೂಕ್ತ ಎಂದು ಹೇಳಿದರು.

Advertisement

ಮಹಾನಗರ ಪಾಲಿಕೆ ಸದಸ್ಯ, ಮಡಿವಾಳ ಸಮಾಜದ ಮುಖಂಡ ಎಚ್‌.ಜಿ. ಉಮೇಶ್‌ ಮಾತನಾಡಿ, ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದಿಂದ ಪ್ರೇರಿತರಾಗಿ ತನ್ನ ಕಾಯಕದ ಜೊತೆ ವಚನ ಸಾಹಿತ್ಯದಂತಹ ಅದ್ಭುತ ಜ್ಞಾನ
ಭಂಡಾರ ರಕ್ಷಿಸಿದ ಮಹಾನ್‌ ಗಣಾಚಾರಿ ಮಾಚಿದೇವರು ಎಂದು ಹೇಳಿದರು. 

ಬಸವ ಬಳಗದ ವಿ. ಸಿದ್ದರಾಮಣ್ಣ ಶರಣರು ಮಾತನಾಡಿ, ಮಡಿವಾಳ ಎನ್ನುವುದು ಒಂದು ಜಾತಿ ಸೂಚಕವಲ್ಲ, ಅದೊಂದು ಧರ್ಮದ ಜ್ಯೋತಿ. 12ನೇ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ಬಿತ್ತಿದ ಬಸವಣ್ಣನೆಂಬ ಬಳ್ಳಿ ಇದೀಗ ವಿಶ್ವಾದ್ಯಂತ ಹರಡಿದೆ. ಡಾ| ಬಿ.ಆರ್‌.ಅಂಬೇಡ್ಕರರು ಭಾರತದ ಸಂವಿಧಾನ ಶಿಲ್ಪಿಯಾದರೆ, ವಚನ ಸಾಹಿತ್ಯ ಬರೆದ ಬಸವಣ್ಣ ವಿಶ್ವಕ್ಕೆ ಸಂವಿಧಾನ ಶಿಲ್ಪಿ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಬಸವ ಬಳಗದ ಅಧ್ಯಕ್ಷ ವೀರಭದ್ರಪ್ಪ ದೇವಿಗೆರೆ, ಶಿವಾನಂದ ಗುರೂಜಿ, ಮಡಿವಾಳ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next