Advertisement

ಶೀಘ್ರದಲ್ಲೇ ಡಬಲ್‌ ಡೆಕ್ಕರ್‌ ಬಸ್‌ಗಳಿಗೆ ಎಲೆಕ್ಟ್ರಾನಿಕ್‌ ರೂಪ   

07:48 PM Aug 28, 2022 | Team Udayavani |

ಮುಂಬಯಿ: ನಗರದ ಹೆಮ್ಮೆಯಾಗಿರುವ ಡಬಲ್‌ ಡೆಕ್ಕರ್‌ ಬಸ್‌ಗಳಿಗೆ ಎಲೆಕ್ಟ್ರಾನಿಕ್‌ ರೂಪ ನೀಡಲು ನಿರ್ಧರಿಸಲಾಗಿದ್ದು, ಮುಂದಿನ ವರ್ಷ ಈ ಬಸ್‌ಗಳ ಸಂಖ್ಯೆಯನ್ನು 1990ರಲ್ಲಿದ್ದ ಪ್ರಮಾಣಕ್ಕೆ ಏರಿಸಲು ಶ್ರಮಿಸಲಾಗುವುದು ಎಂದು ಬೃಹನ್ಮುಂಬಯಿ ವಿದ್ಯುತ್‌ ವಿತರಣೆ ಹಾಗೂ ಸಾರಿಗೆ ಇಲಾಖೆಯ (ಬೆಸ್ಟ್‌) ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪ್ರಸ್ತುತ ಡಬಲ್‌ ಡೆಕ್ಕರ್‌ ಬಸ್‌ಗಳು ಇರುವ ಏಕೈಕ ನಗರ ಎಂಬ ಹಿರಿಮೆ ಮುಂಬಯಿಯದ್ದಾಗಿದ್ದು,  ಕೆಲವು ವರ್ಷಗಳ ಹಿಂದೆ ಕೋಲ್ಕತಾ, ಬೆಂಗಳೂರು, ದಿಲ್ಲಿ, ತಿರುವನಂತಪುರ, ಚೆನ್ನೈ ಮುಂತಾದ ನಗರಗಳಲ್ಲೂ ಈ ಬಸ್‌ಗಳು ಕಂಡು ಬರುತ್ತಿದ್ದವು.

ಬೆಸ್ಟ್‌ ಅಧಿಕಾರಿಗಳು ತಿಳಿಸುವ ಪ್ರಕಾರ, 1990ರ ದಿನಮಾನದಲ್ಲಿ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಡಬಲ್‌ ಡಕ್ಕರ್‌ ಬಸ್‌ನಗಳಿದ್ದವು. ಆದರೆ 1995ರ ಬಳಿಕ ಅವುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು.  2006ರಲ್ಲಿ ಈ ಸಂಖ್ಯೆ ಕೇವಲ 225ಕ್ಕೆ ಇಳಿದಿತ್ತು. ಪ್ರಸ್ತುತ 50ರಷ್ಟು ಬಸ್‌ಗಳು ಕಾರ್ಯಾಚರಿಸುತ್ತಿದ್ದು, ಅವು ನಗರದ ದಕ್ಷಿಣ ಭಾಗದಲ್ಲೇ  ಸಂಚಾರ ನಡೆಸುತ್ತಿವೆ. ಹೆಚ್ಚಿನವು ಪ್ರವಾಸಿಗರನ್ನು ಸಾಗಿಸುವ ಉದ್ದೇಶಕ್ಕೆ ಬಳಸಲ್ಪಡುತ್ತಿವೆ.  ಪ್ರಸ್ತುತ ಸೇವೆಯಲ್ಲಿರುವ ಈ ಬಸ್‌ಗಳು 2007ರಲ್ಲಿ ನಿರ್ಮಾಣವಾದವುಗಳಾಗಿದ್ದು, ಶೀಘ್ರದಲ್ಲೇ ಸೇವೆಯಿಂದ  ನಿವೃತ್ತಿ ಹೊಂದಬೇಕಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2023ರಲ್ಲಿ ಎರಡು ಬಸ್‌ ಗುತ್ತಿಗೆದಾರರು  ನಮಗೆಗೆ 900 ಎಲೆಕ್ಟ್ರಿಕ್‌ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಒದಗಿಸಲಿವೆ ಬೆಸ್ಟ್‌ನ ಜನರಲ್‌ ಮ್ಯಾನೇಜರ್‌ ಲೋಕೇಶ್‌ ಚಂದ್ರ ಅವರು ತಿಳಿಸಿದ್ದಾರೆ. ಡಬಲ್‌ ಡೆಕ್ಕರ್‌ ಬಸ್‌ಗಳು 100 ಮಂದಿಯನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಇತರ ಬಸ್‌ಗಳು ಕೇವಲ 50 ಮಂದಿಯ ಸಾಮರ್ಥ್ಯ ಹೊಂದಿವೆ.

ಆದ್ದರಿಂದ ಡಬಲ್‌ ಡೆಕ್ಕರ್‌ ಬಸ್‌ಗಳು ನಗರದ ಸಾರಿಗೆ ದಟ್ಟಣೆಯನ್ನು  ಕಡಿಮೆ ಮಾಡಲು ಸಹಕಾರಿಯಾದೀತು ಎಂದು ಅವರು ಹೇಳಿದ್ದಾರೆ.

Advertisement

ಕಳೆದ ವಾರವಷ್ಟೇ ದೇಶದಲ್ಲೇ ಮೊದಲ ಹವಾ ನಿಯಂತ್ರಿತ ಡಬಲ್‌ ಡೆಕ್ಕರ್‌ ಬಸ್‌ ಅನ್ನು ಮುಂಬಯಿಯಲ್ಲಿ ಅನಾವರಣಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next