ದೇವದುರ್ಗ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ಒಂದೂವರೆ ತಿಂಗಳಾಗಿದೆ. ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಸೈಕಲ್ ಭಾಗ್ಯ ದೊರೆಯಲಿದ್ದು, ಈಗಾಗಲೇ ಸೈಕಲ್ಗಳ ಜೋಡಣೆ ಕಾರ್ಯ ಭರದಿಂದ ಸಾಗಿದೆ.
ಪಟ್ಟಣ ಸೇರಿ ತಾಲೂಕಿನಾದ್ಯಂತ 31 ಸರಕಾರಿ ಪ್ರೌಢಶಾಲೆಗಳ 8ನೇ ತರಗತಿಯ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೈಕಲ್ ಭಾಗ್ಯ ದೊರೆಯಲಿದೆ. ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆ, ಗಬ್ಬೂರು, ಜಾಲಹಳ್ಳಿ ಪ್ರೌಢಶಾಲೆಗಳ ಆವರಣದಲ್ಲಿ ಕಾರ್ಮಿಕರು ಸೈಕಲ್ ಜೋಡಣೆಯಲ್ಲಿ ತೊಡಗಿದ್ದಾರೆ.
ಈಗಾಗಲೇ ಸರ್ಕಾರಿ ಶಾಲೆ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಗಿದೆ. ಇನ್ನು ಪ್ರೌಢಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಬಾಕಿ ಇದೆ. ದೇವದುರ್ಗ, ಜಾಲಹಳ್ಳಿ, ಗಬ್ಬೂರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಸೈಕಲ್ ಜೋಡಣೆ ನಡೆದಿದ್ದು, ಒಂದೊಂದು ಕೇಂದ್ರದಲ್ಲಿ ಸುಮಾರು 1200ಕ್ಕೂ ಹೆಚ್ಚು ಸೈಕಲ್ ಜೋಡಣೆ ಕಾರ್ಯ ಭರದಿಂದ ಸಾಗಿದೆ. ಮಹಾರಾಷ್ಟ್ರ ಮೂಲದವರಿಗೆ ಸೈಕಲ್ ಪೂರೈಕೆ ಟೆಂಡರ್ ಆಗಿದೆ ಎನ್ನಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಗುಣಮಟ್ಟದ ಸೈಕಲ್ ಪೂರೈಕೆ ಜೊತೆಗೆ ಉತ್ತಮವಾಗಿ ಸೈಕಲ್ ಜೋಡಣೆ ಮಾಡುವಂತೆ ಸೂಚಿಸಿದ್ದಾರೆ. ಪ್ರೌಢಶಾಲೆ ವಿದ್ಯಾರ್ಥಿಗಳು ಸೈಕಲ್ ಏರಿ ಶಾಲೆಗೆ ಹೋಗುವ ಸಂತಸದಲ್ಲಿದ್ದಾರೆ.
ಶೂ ಭಾಗ್ಯ ವಿಳಂಬ: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಒಂದು ಸೆಟ್ ಸಮವಸ್ತ್ರ ವಿತರಣೆ ಮಾಡಲಾಗಿದೆ. ಇನ್ನೊಂದು ಸೆಟ್ ವಿತರಿಸಬೇಕಿದೆ. ಸೈಕಲ್ ವಿತರಣೆಗೆ ಸಿದ್ಧತೆ ನಡೆದಿದೆ. ಆದರೆ ಇನ್ನೂ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆ ಬಾಕಿಇದೆ. ಪ್ರತಿವರ್ಷ ಜುಲೈ ತಿಂಗಳಲ್ಲೇ ಶೂ, ಸಾಕ್ಸ್ ವಿತರಣೆಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಆಗುತ್ತಿತ್ತು. ಈ ವರ್ಷ ಇನ್ನೂ ಅನುದಾನ ಬಾರದ್ದರಿಂದ ಶೂ, ಸಾಕ್ಸ್ ವಿತರಣೆ ವಿಳಂಬವಾಗಿದೆ. ಇದಕ್ಕೆ ರಾಜ್ಯ ರಾಜಕೀಯದಲ್ಲಿನ ಕಿತ್ತಾಟವೂ ಕಾರಣವಾಗಿದೆ ಎನ್ನಲಾಗುತ್ತಿದೆ. ಕೂಡಲೇ ಮಕ್ಕಳಿಗೆ ಶೂ, ಸಾಕ್ಸ್ ಮತ್ತು ಎರಡನೇ ಸಮವಸ್ತ್ರ ವಿತರಣೆಗೆ ಕ್ರಮ ವಹಿಸಬೇಕೆಂದು ಶಿಕ್ಷಣ ಪ್ರೇಮಿ ಹನುಮಗೌಡ ಆಗ್ರಹಿಸಿದ್ದಾರೆ.
ಪಟ್ಟಣ ಸೇರಿ ಜಾಲಹಳ್ಳಿ, ಗಬ್ಬೂರು ಸರಕಾರಿ ಶಾಲೆಗಳ ಆವರಣದಲ್ಲಿ ಸೈಕಲ್ ಜೋಡಣೆ ಕಾರ್ಯ ನಡೆದಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಗುಣಮಟ್ಟದಲ್ಲಿ ಜೋಡಣೆ ಮಾಡುವಂತೆ ಸೂಚನೆ ನೀಡಲಾಗಿದೆ.
•ಡಾ| ಎಸ್.ಎಂ. ಹತ್ತಿ,ಕ್ಷೇತ್ರ ಶಿಕ್ಷಣಾಧಿಕಾರಿ
•ನಾಗರಾಜ ತೇಲ್ಕರ್