Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು ಮತ್ತು ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಅವರು ಕಾಂಗ್ರೆಸ್ ಮುಖಂಡರಾದ ಬಿ.ಶಿವರಾಮು, ಸಿ.ಎಸ್.ಪುಟ್ಟೇಗೌಡ, ಎಚ್.ಎಂ.ವಿಶ್ವನಾಥ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಸಹಕಾರ ಕೋರಿದ್ದೇವೆ. ಕಾಂಗ್ರೆಸ್ ಮುಖಂಡರು ಸೂಕ್ತ ದಿನಾಂಕವನ್ನು ನಿಗದಿಪಡಿಸಿದರೆ ಜೆಡಿಎಸ್ – ಕಾರ್ಯಕರ್ತರ ಸಭೆಯನ್ನು ಏರ್ಪಡಿಸಲಾಗುವುದು ಎಂದರು.
Related Articles
Advertisement
ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಲ್ಲ: ಚುನಾವಣೆಯ ಸಂದರ್ಭದಲ್ಲಿ ಸಚಿವ ರೇವಣ್ಣ ಅವರು ಕಾಂಗ್ರೆಸ್ ಮುಂಡರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ಘೋಷಿತ ಅಭ್ಯರ್ಥಿ ಎ.ಮಂಜು ಅವರ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅವರ ಆರೋಪ, ಟೀಕೆಗಳಿಗೆಲ್ಲಾ ಪ್ರತಿಕ್ರಿಯಿಸಿ ಪೊಳ್ಳಾಗುವುದಿಲ್ಲ.ಬಿಜೆಪಿ ಅಧಿಕಾರದಲ್ಲಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಏನು ಕೊಡುಗೆ ನೀಡಿದೆ ? ಕಳೆದ 5 ವರ್ಷ ಕೇಂದ್ರ ಸರ್ಕಾರದಿಂದ ಹಾಸನ ಜಿಲ್ಲೆಗೆ ಮಹತ್ವದ ಕೊಡುಗೆ ಏನು ಸಿಕ್ಕಿದೆ? ನಾನು ಅಭಿವೃದ್ಧಿಗಷ್ಟೇ ಆದ್ಯತೆ ನೀಡುತ್ತೇವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯುತ್ತೇವೆ ಎಂದು ರೇವಣ್ಣ ಅವರು ಸ್ಪಷ್ಟಪಡಿಸಿದರು.
ಇಂದು 12.05 ಕ್ಕೆ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರತಿನಿಧಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರದ ಉತ್ತರಾಧಿಕಾರಿಯಾಗಲು ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಮಾ.22 ರಂದು ಮಧ್ಯಾಹ್ನ 12.05 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಬೃಹತ್ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು, ಮಾ.22 ರಂದು ಬೆಳಗ್ಗೆ ಹೊಳೆನರಸೀಪುರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದಲ್ಲಿ ಪೂಜೆ, ಆನಂತರ ಹರದನಹಳ್ಳಿಯ ಶ್ರೀ ಈಶ್ವರ ದೇವಾಲಯದಲ್ಲಿ ಪೂಜೆ, ಮಾವಿನಕೆರೆ ಬೆಟ್ಟದ ಶ್ರೀರಂಗನಾಥ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಹಾಸನಕ್ಕೆ ಆಗಮಿಸುವ ಪ್ರಜ್ವಲ್ ಅವರು, ಬೆಳಗ್ಗೆ 10 ಗಂಟೆಗೆ ಹಾಸನ ಎನ್.ಆರ್. ವೃತ್ತಕ್ಕೆ ಆಗಮಿಸಿ ಕಾರ್ಯಕರ್ತರ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಆನಂತರ ಮಧ್ಯಾಹ್ನ 12.05 ಗಂಟೆಗೆ ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು. ಕಡೂರು ಸೇರಿ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಕಾರ್ಯಕರ್ತರು ಆಗಮಿಸಬೇಕು ಎಂದು ಮನವಿ ಮಾಡಿದ ರೇವಣ್ಣ ಅವರು, ಕಾರ್ಯಕರ್ತರು ಮೆರವಣಿಗೆ ಹಾಗೂ ಸಭೆಯಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಪಕ್ಷದ ಮುಖಂಡರಾದ ಪಟೇಲ್ ಶಿವರಾಂ, ಕೆ.ಎಂ.ರಾಜೇಗೌಡ, ಬೂವನಹಳ್ಳಿ ಸ್ವಾಮಿಗೌಡ ಅವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡರ ನಿವಾಸಕ್ಕೆ ಸಚಿವ ರೇವಣ್ಣ ಭೇಟಿ
ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ಗುರುವಾರ ಜಿಲ್ಲಾ ಕಾಂಗ್ರೆಸ್ ಮುಖಂಡರ ನಿವಾಸಗಳಿಗೆ ಭೇಟಿ ನೀಡಿ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಅನಂದ್ ಅವರ ನಿವಾಸಕ್ಕೆ ಭೇಟಿ ನೀಡಿ ಕೆಲ ಸಮಯ ಚರ್ಚಿಸಿದರು. ಚುನಾವಣೆಯಲ್ಲಿ ಪ್ರಜ್ವಲ್ ಅವರನ್ನು ಬೆಂಬಲಿಸಬೇಕು. ಕಾಂಗ್ರೆಸ್ ಕಾರ್ಯಕರ್ತರಿಗೂ ಚುನಾವಣಾ ಮೈತ್ರಿಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಭಾರೀ ಬಹುಮತದೊಂದಿಗೆ ಗೆಲ್ಲಿಸುವ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡಲು ಸಹಕರಿಸಬೇಕು ಎಂದು ಕೋರಿದರು. ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ರಂಗಸ್ವಾಮಿ ಅವರ ನಿವಾಸಕ್ಕೂ ಭೇಟಿ ನೀಡಿದ ರೇವಣ್ಣ ಅವರು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಮತೀಯ ಶಕ್ತಿಗಳ ವಿರುದ್ಧ ಹೋರಾಟ ನಡೆಸಲು ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಇಬ್ಬರು ಕಾಂಗ್ರೆಸ್ ಮುಖಂಡರೂ ಪಕ್ಷದ ಹೈ ಕಮಾಂಡ್ ತೀರ್ಮಾನದಂತೆ ಪ್ರಜ್ವಲ್ ರೇವಣ್ಣ ಅವರ ಪರ ಕೆಲಸ ಮಾಡುವುದಾಗಿ ರೇವಣ್ಣ ಅವರಿಗೆ ಭರವಸೆ ನೀಡಿದರು.