ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಧಿಕೃತ ಘೋಷಣೆಯಾಗಿದ್ದು, ಸೀಟು ಹಂಚಿಕೆ ಕುರಿತು ಚರ್ಚಿಸಲೆಂದೇ ರಾಜ್ಯ ಬಿಜೆಪಿ ನಾಯಕರನ್ನು ವರಿಷ್ಠರು ಶೀಘ್ರವೇ ದಿಲ್ಲಿಗೆ ಕರೆಸಿ ಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ನಾಯಕ, ಉಪನಾಯಕರ ನೇಮಕ ವಿಚಾರವೂ ಇತ್ಯರ್ಥವಾಗುವ ಸಾಧ್ಯತೆ ಇದೆ.
ವಿಜಯ ದಶಮಿ ಬಳಿಕ ಜಂಟಿ ಘೋಷಣೆ
ಬಿಜೆಪಿ ಮತ್ತು ಜೆಡಿಎಸ್ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಕುರಿತು ವಿಜಯ ದಶಮಿ ಬಳಿಕ ಕರ್ನಾಟಕದಲ್ಲೇ ಜಂಟಿ ಘೋಷಣೆ ಸಾಧ್ಯತೆ ಇದೆ. ಬಿಜೆಪಿ ಮೂಲಗಳ ಪ್ರಕಾರ, ಜೆಡಿಎಸ್‌ಗೆ ಗರಿಷ್ಠ ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆ ಇದೆ. ಇದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸೆಣಸಲು ಕುಮಾರಸ್ವಾಮಿಗೂ ಇಷ್ಟ ಇದ್ದಂತಿಲ್ಲ. ಹಾಸನ, ಮಂಡ್ಯ, ಕೋಲಾರ ಹಾಗೂ ತುಮಕೂರು ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಕೋಲಾರದ ಬದಲು ಚಿಕ್ಕಬಳ್ಳಾಪುರವನ್ನು ಮೈತ್ರಿ ಪಕ್ಷಕ್ಕೆ ಕೊಡುವುದು ಸೂಕ್ತ ಎಂಬುದು ಬಿಜೆಪಿ ನಾಯಕರ ನಿಲುವು. ಬಿಜೆಪಿಯ ಒಂದು ಬಣ ತುಮಕೂರು ಕ್ಷೇತ್ರ ತ್ಯಾಗದ ಬಗ್ಗೆಯೂ ಅಪಸ್ವರ ಎತ್ತಿದೆ. ಎರಡೂ ಪಕ್ಷಗಳಲ್ಲಿರುವ ಈ ಗೊಂದಲ ನಿವಾರಣೆ ಆಗುವವರೆಗೂ ಸೀಟು ಹಂಚಿಕೆ ಬಗ್ಗೆ ಬಹಿರಂಗ ಹೇಳಿಕೆ ನೀಡದಿರಲು ನಿರ್ಧರಿಸಲಾಗಿದೆ.
ಜೆಡಿಎಸ್‌ನ ಕೆಲವು ಶಾಸಕರೂ ಮೈತ್ರಿಗೆ ವಿರುದ್ಧ ವಾಗಿದ್ದಾರೆ. ಅವರನ್ನು ಒಪ್ಪಿಸುವ ಸವಾಲು ಕುಮಾರಸ್ವಾಮಿ ಮುಂದಿದೆ. ಇದೆಲ್ಲ ಪ್ರಕ್ರಿಯೆ ಆದ ಮೇಲೆ ರಾಜ್ಯ ನಾಯಕರ ಜತೆಗೆ ಕುಮಾರಸ್ವಾಮಿ ಚರ್ಚೆ ನಡೆಸಿ ಒಮ್ಮತಕ್ಕೆ ಬರಲಿದ್ದಾರೆ.
ಗ್ರಾಮಾಂತರಕ್ಕೆ ಯೋಗೇಶ್ವರ?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ದಿಂದ ಕುಮಾರಸ್ವಾಮಿ ಕಣಕ್ಕಿಳಿಯಲಿ ಎಂಬುದು ಕೆಲವು ಬಿಜೆಪಿ ನಾಯಕರ ಅಪೇಕ್ಷೆ. ಸಂಸದ ಡಿ.ಕೆ.ಸುರೇಶ್ ವಿರುದ್ಧ ಆಗ ತುರುಸಿನ ಪೈಪೋಟಿ ನೀಡಲು ಸಾಧ್ಯ ಎಂಬುದು ಇದರ ಹಿಂದಿರುವ ಲೆಕ್ಕಾಚಾರ. ಆದರೆ ಕುಮಾರಸ್ವಾಮಿ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಹೆಸರು ಮುನ್ನೆಲೆಗೆ ಬಿಡಲಾಗಿದೆ. ಕುಮಾರಸ್ವಾಮಿ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಎರಡು ಬಾರಿ ಯೋಗೇಶ್ವರ “ಯೋಗಕ್ಷೇಮ’ ವಿಚಾರಿಸಲೆಂದು ಭೇಟಿಯಾಗಿದ್ದರು. ಬೆಂಗಳೂರು ಗ್ರಾಮಾಂತರದ ಮೈತ್ರಿ ಅಭ್ಯರ್ಥಿಯೋಗೇಶ್ವರ ಎಂಬ ಸಂದೇಶವನ್ನು ಜೆಡಿಎಸ್ ಪಾಳಯದಿಂದಲೂ ಹರಿಬಿಡಲಾಗಿದೆ.