ಮುಂಬಯಿ : ಕಳೆದ ವರ್ಷ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯ ಸಾಧನೆಯನ್ನು ಮಾಡಿದ್ದ ದೇಶದ ಪ್ರಮುಖ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ 21ರ ಹರೆಯದ ಪಿ ವಿ ಸಿಂಧು ಅವರ ಜೀವನ ಕಥೆ ಹಾಗೂ ಕ್ರೀಡಾ ಸಾಧನೆಯು ಈಗಿನ್ನು ಬೆಳ್ಳಿತೆರೆಯಲ್ಲಿ ಮೂಡಿ ಬರಲಿದೆ.
ನಟ, ನಿರ್ಮಾಪಕ ಸೋನು ಸೂದ್ ಅವರು ಸಿಂಧು ಅವರ ಬಯೋಪಿಕ್ ತಯಾರಿಸಲಿದ್ದಾರೆ. ಆ ಮೂಲಕ ಸಿಂಧು ಅವರ ಜೀವನ ಕಥೆ ಹಾಗೂ ದೇಶವೇ ಹೆಮ್ಮೆ ಪಡುವ ಕ್ರೀಡಾ ಸಾಧನೆಯನ್ನು ಬೆಳ್ಳಿತೆರೆಗೆ ತರಲಿದ್ದಾರೆ.
“ಪಿ ವಿ ಸಿಂಧು ಅವರ ಬಗ್ಗೆ ಬಯೋಪಿಕ್ ಮಾಡುವುದು ನಿಜಕ್ಕೂ ನನಗೊಂದು ಮಹಾನ್ ಹೆಮ್ಮೆಯ ವಿಷಯ. ಭಾರತದ ಮಿಲಿಯಾಂತರ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯ ಚಿಲುಮೆಯಾಗಿರುವಂತಹ ಮಹೋನ್ನತ ಕ್ರೀಡಾ ಸಾಧನೆಯನ್ನು ಸಿಂಧು ಮಾಡಿದ್ದಾರೆ. ಆ ಮೂಲಕ ಆಕೆ ಪ್ರತಿಯೋರ್ವ ಭಾರತೀಯ ಭಾರೀ ದೊಡ್ಡ ಸಾಧನೆಯ ಕನಸನ್ನು ಕಾಣಬಹುದು ಮತ್ತು ಅದನ್ನುಕಠಿನ ಪರಿಶ್ರಮದ ಮೂಲಕ ಸಾಕಾರಗೊಳಿಸಬಹುದೆಂಬುದನ್ನು ಸಿಂಧು ತೋರಿಸಿಕೊಟ್ಟಿದ್ದಾರೆ’ ಎಂದು ಸೂದ್ ಹೇಳಿದರು.
ಹೈದರಾಬಾದಿನಲ್ಲಿ ಜನಿಸಿದ್ದ ಪಿ ವಿ ಸಿಂಧು ಅವರು ತನ್ನ ಎಂಟರ ಹರೆಯದಲ್ಲೇ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದರು. 2001ರಲ್ಲಿ ಆಲ್ ಇಂಗ್ಲಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪ್ಯನ್‌ಶಿಪ್ ಗೆದ್ದು ವಿಕ್ರಮ ಸಾಧಿಸಿದ್ದ ಪುಲ್ಲೇಲ ಗೋಪೀಚಂದ್ ಅವರಿಂದ ತಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಸಿಂಧು ಹೇಳಿಕೊಂಡಿದ್ದಾರೆ.
“ಸೋನು ಸೂದ್ ಅವರು ನನ್ನ ಬಗ್ಗೆ, ನನ್ನ ಕ್ರೀಡಾ ಸಾಧನೆಯ ಬಗ್ಗೆ ಬಯೋಪಿಕ್ ನಿರ್ಮಿಸಲು ನಿರ್ಧರಿಸಿರುವುದು ನನಗೆ ಅಪಾರ ಸಂತಸ ತಂದಿದೆ. ಇದು ನಿಜಕ್ಕೂ ನನಗೆ ಬಹುದೊಡ್ಡ ಗೌರವವೇ ಆಗಿದೆ. ಕಳೆದ ಎಂಟು ತಿಂಗಳಿಂದಲೂ ಸೂದ್ ಅವರ ತಂಡ ನನ್ನ ಜೀವನ ಹಾಗೂ ಕ್ರೀಡಾ ಯಶೋಗಾಥೆಯ ಬಗ್ಗೆ ಆಳವಾದ ಸಂಶೋಧನೆ ನಡೆಸಿರುವುದು ನಿಜಕ್ಕೂ ಮೆಚ್ಚುವಂಥದ್ದು’ ಎಂದು ಸಿಂಧು ಸಂತಸ ವ್ಯಕ್ತಪಡಿಸಿದ್ದಾರೆ.