ಮುಂಬೈ : ಕಳೆದ ವರ್ಷದಿಂದ ಅನೇಕ ಜನ ಸಾಮಾನ್ಯರಿಗೆ ಸಹಾಯ ಮಾಡುತ್ತಿರುವ ಬಾಲಿವುಡ್ ನಟ ಸೋನು ಸೂದ್ ರಿಯಲ್ ಹೀರೋ ಆಗಿದ್ದಾರೆ.
ಇವರು ಮಾಡುತ್ತಿರುವ ಸಾಮಾಜಿಕ ಕಾರ್ಯದಿಂದ ಸೋನು ಸೂದ್ ಅವರನ್ನು ದೇವರಂತೆ ಆರಾದಿಸುತ್ತಿದ್ದಾರೆ. ಅದು ಎಷ್ಟರ ಮಟ್ಟಿಯೆಂದರೆ ತಮ್ಮ ಅಂಗಡಿ, ಗ್ಯಾರೇಜ್ ಗಳಿಗೆ ಈ ನಟನ ಹೆಸರು ಇರಿಸಿ ಗೌರವ ಸೂಚಿಸುತ್ತಿದ್ದಾರೆ.
ಇದೀಗ ತೆಲಂಗಾಣದಲ್ಲಿ ಮಟನ್ ಶಾಪ್‌ವೊಂದಕ್ಕೆ ಸೋನು ಸೂದ್ ಅವರ ಹೆಸರನ್ನು ಇಡಲಾಗಿದೆ. ಇದಕ್ಕೆ ಸೋನು ಕೂಡ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಈ ಕುರಿತಾಗಿ ಟ್ವೀಟ್ ಮಾಡಿರುವ ನಟ, ಸಖತ್ ಹ್ಯೂಮರಸ್ ಆಗಿ ಹಾಗೂ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಸಸ್ಯಾಹಾರಿ… ನನ್ನ ಹೆಸರಿನಲ್ಲಿ ಮಟನ್ ಅಂಗಡಿ..? ನಾನು ಅವರಿಗೆ ಯಾವುದಾದರೂ ಸಸ್ಯಾಹಾರಕ್ಕೆ ಸಂಬಂಧಿಸಿದ ವ್ಯಾಪಾರ ಮಾಡಲು ಸಹಾಯ ಮಾಡಬಹುದೇ..?’ ಎಂದು ಟ್ವೀಟ್ ಮಾಡಿದ್ದಾರೆ.
ಸೋನು ಸೂದ್ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ ಕೋವಿಡ್ ರೋಗಿಗಳಿಗೆ ಆಮ್ಲಜನಕ ಸಾಂದ್ರಕಗಳನ್ನು ಮತ್ತು ಇತರ ಅಗತ್ಯ ಸಾಧನಗಳನ್ನೂ ವ್ಯವಸ್ಥೆ ಮಾಡುತ್ತಿದ್ದಾರೆ. ಜೂನ್‌ನಲ್ಲಿ ಆಂಧ್ರಪ್ರದೇಶದಲ್ಲಿ ಒಂದೆರಡು ಆಮ್ಲಜನಕ ಘಟಕಗಳನ್ನು ಸ್ಥಾಪಿಸುವುದಾಗಿ ಸೋನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದರು.