Advertisement
ಈ ಬಗ್ಗೆ ಅವರು 24 ಟ್ವೀಟ್‌ಗಳನ್ನು ಮಾಡಿದ್ದು, ಟ್ವಿಟರ್‌ನಲ್ಲಿ ಆಗುತ್ತಿರುವ ಎಡ – ಬಲ ಸೈದ್ಧಾಂತಿಕ ಕಾದಾಟಗಳು, ರಾಷ್ಟ್ರೀಯವಾದ ಕುರಿತ ಚರ್ಚೆಗಳು ದಿಕ್ಕುತಪ್ಪುತ್ತಿದ್ದು, ಒಂದು ವರ್ಗವನ್ನು ಮಾತ್ರ ಗುರಿಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಲೇಖಕಿ ಅರುಂಧತಿ ರಾಯ್ ವಿರುದ್ಧ ನಟ, ಸಂಸದ ಪರೇಶ್ ರಾವಲ್ ಅವರ ಟ್ವೀಟ್, ಶೈಲಾ ರಶೀದ್ ಕುರಿತ ಪ್ರಕರಣದಲ್ಲಿ ಗಾಯಕ ಅಭಿಜಿತ್ ಭಟ್ಟಾಚಾರ್ಯ ವಿರುದ್ಧ ಟ್ವಿಟರ್ ಇಂಡಿಯಾ ಖಾತೆಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಸೋನು ನಿಗಮ್ ಹೀಗೆ ಮಾಡಿದ್ದಾರೆ. ಬುಧವಾರ ಬೆಳಗ್ಗೆ 10.13ಕ್ಕೆ ಈ ಸಂಬಂಧ ಅವರು ಮೊದಲ ಟ್ವೀಟ್ ಮಾಡಿದ್ದು, ಟ್ವಿಟರ್‌ನಲ್ಲಿ ತಮ್ಮ 70 ಲಕ್ಷ ಹಿಂಬಾಲಕರನ್ನು ಬಿಟ್ಟು ಹೊರಹೋಗುವುದಾಗಿ ಹೇಳಿದ್ದಾರೆ. ಇದು ಕೆಲವರಿಗೆ ದುಃಖ ತಂದರೆ, ಮತ್ತೆ ಕೆಲವರಿಗೆ ಅತ್ಯಂತ ಖುಷಿ ತರಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಗಾಯಕ ಅಭಿಜೀತ್ ಭಟ್ಟಾಚಾರ್ಯ ಇತ್ತೀಚೆಗೆ ಜೆಎನ್‌ಯುವಿನ ಹಳೆ ವಿದ್ಯಾರ್ಥಿ, ಹೋರಾಟಗಾರ್ತಿ ಶೆಹ್ಲಾ ರಶೀದ್ ವಿರುದ್ಧ ಜೆಎನ್‌ಯು ವಿದ್ಯಾರ್ಥಿಯೊಬ್ಬರು ಬರೆದ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದರು. ಇದರ ವಿರುದ್ಧ ಟ್ವಿಟರ್‌ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಈ ಟ್ವೀಟ್ ಮಹಿಳೆಯೊಬ್ಬರ ವಿರುದ್ಧ ತೀವ್ರ ಅಶ್ಲೀಲ ಆಕ್ಷೇಪಾರ್ಹವಾಗಿದೆ ಎಂಬ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಟ್ವಿಟರ್ ಇಂಡಿಯಾ ವಜಾಗೊಳಿಸಿತ್ತು. ಇದರ ವಿರುದ್ಧ ಅವರು ಹೇಳಿಕೆ ನೀಡಿ, ‘ಟ್ವಿಟರ್‌ನಲ್ಲಿ ಮೋದಿ ವಿರೋಧಿಗಳು, ರಾಷ್ಟ್ರವಿರೋಧಿಗಳು, ದೇಶದ ಸೇನೆಯ ವಿರೋಧಿಗಳು, ಹಿಂದೂ ವಿರೋಧಿಗಳು, ಉಗ್ರರ ಬೆಂಬಲಿಗರು, ನಕ್ಸಲರ ಬೆಂಬಲಿಗರು ತುಂಬಿಕೊಂಡಿದ್ದಾರೆ ಎಂದಿದ್ದಾರೆ. ಅಲ್ಲದೇ ಈ ನಕ್ಸಲರಿಗೆ ನಾನು ಒಂದು ಮಾತು ಹೇಳುತ್ತೇನೆ. ಅವರನ್ನೆಲ್ಲ ಕಠಿಣವಾಗಿ ಶಿಕ್ಷಿಸಬೇಕು. ಇದೊಂದು ಜಿಹಾದಿ ಟ್ವಿಟರ್’ ಎಂದಿದ್ದರು.