Advertisement

ಸೋನು ಗುಲ್ಟಾ ಹೇಳುತ್ತಾರೆ!

07:30 AM Apr 15, 2018 | |

ಸೋನು ಗೌಡ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಗುಲ್ಟಾ. ಆನ್‌ಲೈನ್‌ ಕ್ರೈಮ್‌ ಹಿನ್ನೆಲೆಯಲ್ಲಿ ಸಾಗುವ ಗುಲ್ಟಾ. ಚಿತ್ರದಲ್ಲಿ ತನಗೆ ಒಳ್ಳೆಯ ಪಾತ್ರವಿದೆ ಎಂದು ಹಿಂದೊಮ್ಮೆ ಸೋನು ಹೇಳಿಕೊಂಡಿದ್ದರು. ಒಳ್ಳೆಯ ಪಾತ್ರವಷ್ಟೇ ಅಲ್ಲ, ಆ ಚಿತ್ರ ಈಗ ದೊಡ್ಡ ಹಿಟ್‌ ಆಗಿದೆ. ಅಷ್ಟೇ ಅಲ್ಲ, ಎಲ್ಲರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ಈ ಚಿತ್ರದ ಯಶಸ್ಸು ಅವರಲ್ಲಿ ಇನ್ನಷ್ಟು ಉತ್ಸಾಹ ತುಂಬಿದೆ. ಅದೇ ಉತ್ಸಾಹದಲ್ಲಿ ಅವರು ತಮ್ಮ ಇನ್ನೊಂದು ಚಿತ್ರ ಕಾನೂರಾಯಣದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

Advertisement

ಅಂದಹಾಗೆ, ಕಾನೂರಾಯಣವು ಹಿರಿಯ ನಿರ್ದೇಶಕ ಟಿ.ಎಸ್‌. ನಾಗಾಭರಣ ನಿರ್ದೇಶನದ ಚಿತ್ರ. ಈ ಚಿತ್ರದ ವಿಶೇಷತೆಯೆಂದರೆ, ಈ ಚಿತ್ರವು ಬರೀ ಸಹಕಾರಿ ವ್ಯವಸ್ಥೆಯಲ್ಲಷ್ಟೇ ಅಲ್ಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವ -ಸಹಾಯ ಸಂಘಗಳ ಒಕ್ಕೂಟ ಟ್ರಸ್ಟ್‌ನ ವತಿಯಿಂದ ನಿರ್ಮಾಣವಾಗಿದೆ. ಆ ಟ್ರಸ್ಟ್‌ನ ವಿವಿಧ ಸಂಘಗಳಲ್ಲಿ ಸುಮಾರು 20 ಲಕ್ಷ ಸದಸ್ಯರಿದ್ದು, ಒಬ್ಬೊಬ್ಬ ಸದಸ್ಯ ತಲಾ 20 ರೂ. ಹಾಕಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಂದು ಚಿತ್ರಕ್ಕೆ ಅಷ್ಟೊಂದು ಸಂಖ್ಯೆಯ ನಿರ್ಮಾಪಕರು ಇದೇ ಮೊದಲು. ಹಾಗಾಗಿ ಇದು ದಾಖಲಾರ್ಹ ಚಿತ್ರ ಎಂದರೆ ತಪ್ಪಿಲ್ಲ. 20 ಲಕ್ಷ ಜನ 20 ರೂ. ಹಾಕಿರುವುದರಿಂದ ನಾಲ್ಕು ಕೋಟಿಯಷ್ಟು ಸಂಗ್ರಹವಾಗಿದ್ದು, ಅದರಲ್ಲಿ ಸುಮಾರು ಎರಡೂ ಕಾಲು ಕೋಟಿ ಚಿತ್ರಕ್ಕೆ ಖರ್ಚಾಗಿದೆ. ಈ ಚಿತ್ರದಲ್ಲಿ ಸೋನು ಕಾನೂರು ಎಂಬ ಊರಿನ ಮಹಿಳೆಯಾಗಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅದು ಬಿಟ್ಟರೆ,  ಚಂಬಲ್‌ ಹಾಗೂ ಶಾಲಿನಿ ಐಎಎಸ್‌ ಚಿತ್ರಗಳಲ್ಲೂ ಸೋನು ನಟಿಸುತ್ತಿದ್ದಾರೆ. ಈ ಎರಡರಲ್ಲೂ ವಿಭಿನ್ನವಾದ ಪಾತ್ರಗಳು ಅವರ ಪಾಲಾಗಿವೆ. ಇದರ ಜೊತೆಗೆ ಇನ್ನೊಂದಿಷ್ಟು ಅವಕಾಶಗಳು, ಹುಡುಕಾಟಗಳು ಎಲ್ಲವೂ ನಡೆಯುತ್ತಲಿವೆ. “ನಾನು ಒಳ್ಳೆಯ ಸಿನೆಮಾಗಳನ್ನು ಆಯ್ಕೆ ಮಾಡಲು ಪ್ರಯತ್ನ ಪಡುತ್ತೀನಿ. ಹಾಗಂತ ನಾವು ಆಯ್ಕೆ ಮಾಡಿದ ಸಿನೆಮಾಗಳೆಲ್ಲವೂ ನಮ್ಮ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ ಎನ್ನುವಂತಿಲ್ಲ. ಅಲ್ಲಿ ನಿರ್ದೇಶಕರ ಕಲ್ಪನೆ ಕೂಡಾ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಾನು ನಟಿಸಿದ ಸಿನಿಮಾಗಳ ಬಗ್ಗೆ ಖುಷಿ ಇದೆ. ಸಹಜವಾಗಿಯೇ ಕೆಲವು ಕಡೆ ಎಡವಿದ್ದೇನೆ. ಅದೊಂದು ಪಾಠ ಎಂದುಕೊಂಡು ಮುಂದೆ ಸಾಗಿದ್ದೇನೆ’ ಎನ್ನುತ್ತಾರೆ ಸೋನು.

Advertisement

Udayavani is now on Telegram. Click here to join our channel and stay updated with the latest news.

Next