Advertisement

ಸುಷ್ಮಾ ಪತಿ ಕೌಶಲ್‌ ಗೆ ಸೋನಿಯಾ ಭಾವಾನಾತ್ಮಕ ಪತ್ರ

09:27 AM Aug 08, 2019 | Hari Prasad |

ಹೊಸದಿಲ್ಲಿ: ಸುಷ್ಮಾ ಸ್ವರಾಜ್‌ ಅವರ ನಿಧನಕ್ಕೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಜೊತೆಯಾಗಿ ಸುಮಾರು ಎರಡು ದಶಕಗಳಿಗೂ ಹೆಚ್ಚುಕಾಲ ಕೆಲಸ ಮಾಡಿದ್ದ ಸುಷ್ಮಾ ಅವರ ನಿಧನ ತೀವ್ರ ದುಃಖ ತಂದಿದೆ ಎಂದಿದ್ದಾರೆ.

Advertisement

ಸೈದ್ಧಾಂತಿಕವಾಗಿ ತಮ್ಮಿಬ್ಬರ ರಾಜಕೀಯ ನಿಲುವುಗಳು ವಿರುದ್ಧವಾಗಿದ್ದರೂ, ದೇಶದ ಏಕತೆ ಮತ್ತು ಸಾವಭೌಮತೆಯ ವಿಷಯ ಬಂದಾಗ ನಾವಿಬ್ಬರೂ ಒಂದೇ ನಿಲುವಿಗೆ ಬದ್ಧತೆ ತೋರುತ್ತಿದ್ದೆವು ಎಂದು ತಮ್ಮ ಮತ್ತು ಸುಷ್ಮಾ ಸ್ವರಾಜ್ ನಡುವಿನ ನೆನಪುಗಳನ್ನು ಕಾಂಗ್ರೆಸ್ ಅಧಿನಾಯಕಿ ಮೆಲುಕು ಹಾಕಿದ್ದಾರೆ.

ತಮ್ಮ ರಾಜಕೀಯ ಸಹವರ್ತಿ ಸುಷ್ಮಾ ಸ್ವರಾಜ್‌ ಅವರ ನಿಧನಕ್ಕೆ ಸೋನಿಯಾ ಗಾಂಧಿ ಅವರು ಸುಷ್ಮಾ ಅವರ ಪತಿ ಸ್ವರಾಜ್‌ ಕೌಶಲ್‌ ಅವರಿಗೆ ಪತ್ರದ ಮೂಲಕ ತಮ್ಮ ಭಾವಾನಾತ್ಮಕ ಸಂದೇಶವನ್ನು ತಿಳಿದ್ದಾರೆ. ಈ ಪತ್ರದಲ್ಲಿ ತಮ್ಮ ಮತ್ತು ಸುಷ್ಮಾ ಸಂಬಂಧಗಳ ಕುರಿತಾಗಿ ವಿವರಿಸಿದ್ದಾರೆ.

“ನಿಮ್ಮ ಪ್ರೀತಿಯ ಪತ್ನಿ ಶ್ರೀಮತಿ ಸುಷ್ಮಾ ಸ್ವರಾಜ್‌ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಸುಷ್ಮಾ ಅವರು ರಾಜಕೀಯ ಕ್ಷೇತ್ರದ ವಿಶೇಷ ಪ್ರತಿಭೆಯಾಗಿದ್ದರು. ಅವರು ತಮ್ಮ ವೈಯಕ್ತಿಕ ಜೀವನ ಮತ್ತು ರಾಜಕೀಯ ಜೀವನದಲ್ಲಿ ಒಂದೇ ಆದರ್ಶವನ್ನು ಪಾಲಿಸುತ್ತಾ ಬಂದವರು.

ಪಕ್ಷದ ಯಾವುದೇ ಸ್ಥಾನಮಾನ ಇರಬಹುದು ಅಥವ ಯಾವುದೇ ಸ್ತರದ ಅಧಿಕಾರವನ್ನು ಹೊಂದಿದಾಗಲೂ, ಅವರ ನಡತೆ ಮತ್ತು ನಿರ್ಧಾರಗಳಲ್ಲಿ ನಾನು ಯಾವುದೇ ಬದಲಾವಣೆ ಗುರುತಿಸಿಲ್ಲ. ಒಂದೇ ತತ್ವವನ್ನು ಪಾಲಿಸಿಕೊಂಡು ಬಂದ ಅವರ ನಿರ್ಧಾರ ಅಚಲವಾಗಿತ್ತು. ತಮ್ಮ  ಕಾರ್ಯಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿರಲಿಲ್ಲ.

Advertisement

ನಾನು ಮತ್ತು ಸುಷ್ಮಾ ಅವರು ಹಲವು ಲೋಕಸಭೆಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾ ಬಂದಿದ್ದೇವೆ. ರಾಜಕೀಯವಾಗಿ ನಮ್ಮ ಸಿದ್ಧಾಂತಗಳು ಭಿನ್ನವಾಗಿದ್ದರೂ, ನಾವಿಬ್ಬರು ಒಳ್ಳೆಯ ಗೆಳೆತನವನ್ನು ಕಾಪಾಡಿಕೊಂಡು ಬಂದಿದ್ದೆವು. ಆದರೆ ಇದೀಗ ಇದ್ದಕ್ಕಿಂದಂತೆ ಅವರ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ.

ಹಿಂದಿನ ಸರಕಾರದಲ್ಲಿ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಅವರು ವಿವಿಧ ದೇಶಗಳಿಗೆ ತೆರಳಿ ಉಭಯ ದೇಶಗಳ ಮಧ್ಯೆ ಸಹಬಾಳ್ವೆಯ ಬೀಜ ಬಿತ್ತಿದ್ದರು. ಈ ಕಾರಣದಿಂದ ವಿದೇಶದಲ್ಲಿ ಭಾರತೀಯರು ಯಾರಾದರೂ ಸಂಕಷ್ಟ ಅನುಭವಿಸಿದ್ದರೆ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಜವಾಬ್ದಾರಿಯನ್ನು ಸುಷ್ಮಾ ಅವರು ನಿಭಾಯಿಸುತ್ತಿದ್ದರು.

ತಾನು ದೇಶಕ್ಕೆ ಸಲ್ಲಿಸಬೇಕಾದ ಸೇವೆಯನ್ನು ಸಣ್ಣ ವಯಸ್ಸಿನಿಂದಲೇ ಪೂರೈಸಿ ಇದೀಗ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಸುಷ್ಮಾ ನಿಧನ ವೈಯಕ್ತಿಕವಾಗಿ ನನಗೂ ತುಂಬಾ ನಷ್ಟವಾಗಿದೆ ಎಂದು ಸೋನಿಯಾ ಅವರು ತಾವು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸುಷ್ಮಾ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನಿಮಗೆ ಮತ್ತು ಪುತ್ರಿ ಬನ್ಸೂರಿ ಅವರಿಗೆ ಕರುಣಿಸಲಿ. ದೇಶಕ್ಕಾಗಿ ಸೇವೆಗೈದ ವ್ಯಕ್ತಿತ್ವ, ಜೀವನದ ಸಂಪಾದಿಸಿದ ಗೌರವ ಅವರನ್ನು ಸಾವಿನಲ್ಲೂ ಜೀವಂತವಾಗಿರಿಸಿದೆ. ಅವರು ಬದುಕಿದ್ದಂತೆ ನಮ್ಮನ್ನು ಬಿಟ್ಟು ತೆರಳಿದ್ದಾರೆ. ತಮ್ಮ ಕೊನೆಯ ಉಸಿರು ಇರುವರೆಗೂ ಚುರುಕಾಗಿದ್ದರು. ಸುಷ್ಮಾ ಸ್ವರಾಜ್‌ ಅವರಿಗೆ ನನ್ನ ದುಃಖತಪ್ತ ನುಡಿನಮನಗಳು’ – ಎಂದು ಸುಷ್ಮಾ ಸ್ವರಾಜ್‌ ಪತಿ ಸ್ವರಾಜ್‌ ಕೌಶಲ್‌ ಅವರಿಗೆ ಬರೆದ ಭಾವಾನಾತ್ಮಕ ಸಂದೇಶದಲ್ಲಿ ಸೋನಿಯಾ ಗಾಂಧಿ ಅವರು ಸಾಂತ್ವನದ ಮಾತುಗಳನ್ನಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next