Advertisement

ಮೈತ್ರಿ ಮುರಿಯಬೇಡಿ : ನಿತೀಶ್‌, ಲಾಲುಗೆ ಫೋನ್‌ ಮಾಡಿ ಸೋನಿಯಾ ಸಲಹೆ

04:50 AM Jul 15, 2017 | Karthik A |

ಹೊಸದಿಲ್ಲಿ/ಪಾಟ್ನಾ: ಬಿಹಾರದಲ್ಲಿರುವ ಮಹಾ ಮೈತ್ರಿಕೂಟವನ್ನು ಬಚಾವ್‌ ಮಾಡಬೇಕೆಂದರೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಮಧ್ಯಪ್ರವೇಶಿಸಬೇಕು ಎಂದು ಬುಧವಾರ ಜೆಡಿಯುನ ಹಿರಿಯ ನಾಯಕರೊಬ್ಬರು ಪ್ರತಿಪಾದಿಸಿದ್ದರು. ಅದರಂತೆಯೇ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಗುರುವಾರ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಹಾಗೂ ಲಾಲು ಪ್ರಸಾದ್‌ ಯಾದವ್‌ ಜತೆ ಫೋನ್‌ನಲ್ಲಿ ಮಾತುಕತೆ ನಡೆಸಿದ್ದಾರೆ.

Advertisement

ಲಾಲು ಮತ್ತು ನಿತೀಶ್‌ಕುಮಾರ್‌ ಮಹಾ ಮೈತ್ರಿಕೂಟವನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ, ಆರ್‌ಜೆಡಿ ಮತ್ತು ಜೆಡಿಯು ನಡುವಿನ ಬಾಂಧವ್ಯ ಏನೇನೂ ಚೆನ್ನಾಗಿಲ್ಲ ಎನ್ನುವುದನ್ನು ಸೂಚಿಸುವಂತೆ ಮಾತನಾಡಿರುವ ಜೆಡಿಯು ನಾಯಕ ಕೆ.ಸಿ.ತ್ಯಾಗಿ, ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಮುಂಚೂಣಿಯ ನಾಯಕರಾಗಿದ್ದುದರಿಂದಲೇ ಆರ್‌ಜೆಡಿಗೆ 80 ಸ್ಥಾನಗಳು ಲಭಿಸಿದ್ದವು ಎಂದು ತಿರುಗೇಟು ನೀಡಿದ್ದಾರೆ.

ಸೋನಿಯಾರಿಂದ ಫೋನ್‌: 2 ದಿನಗಳ ಹಿಂದೆ ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಯವರಿಗೆ ಬೆಂಬಲ ನೀಡಬೇಕು ಎಂದು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರು ನಿತೀಶ್‌ಗೆ ಫೋನ್‌ ಮಾಡಿದ್ದರು. ಇದೀಗ ಆರ್‌ಜೆಡಿ ನಾಯಕ ಲಾಲು ಯಾದವ್‌ ಕುಟುಂಬ ಸದಸ್ಯರ ಮೇಲೆ ಸಿಬಿಐ ಕೇಸು ದಾಖಲಿಸಿರುವ ಹಿನ್ನೆಲೆಯಲ್ಲಿ ಜೆಡಿಯು-ಆರ್‌ಜೆಡಿ ನಡುವೆ ಬಿಕ್ಕಟ್ಟು ಉಂಟಾಗಿದೆ. ಹೀಗಾಗಿ ಸೋನಿಯಾ ಗುರುವಾರ ನಿತೀಶ್‌ ಮತ್ತು ಲಾಲು ಯಾದವ್‌ಗೆ ಫೋನ್‌ ಮಾಡಿದ್ದಾರೆ. ಈ ಬಗ್ಗೆ ಬಿಹಾರ ಪ್ರದೇಶ ಕಾಂಗ್ರೆಸ್‌ ಸಮಿತಿ ವಕ್ತಾರ ಹರೇಂದ್ರ ಕುಮಾರ್‌ ವರ್ಮಾ ಖಚಿತಪಡಿಸಿದ್ದಾರೆ. ‘ನಮ್ಮ ಪಕ್ಷದ ಅಧ್ಯಕ್ಷೆ ಸಿಎಂ ನಿತೀಶ್‌ ಕುಮಾರ್‌ ಮತ್ತು ಆರ್‌ಜೆಡಿ ನಾಯಕ ಲಾಲು ಜತೆ ಮಾತನಾಡಿದ್ದಾರೆ. ಒಂದೆರಡು ದಿನಗಳಲ್ಲಿ ಎಲ್ಲವೂ ಶಮನಗೊಳ್ಳಲಿದೆ’ ಎಂದಿದ್ದಾರೆ ಅವರು.

ಸಭೆಯಲ್ಲಿ ಚರ್ಚೆ: ಈ ತಿಂಗಳ 22-23ರಂದು ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ದಿಲ್ಲಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸಭೆಗೆ ಸಿಎಂ ನಿತೀಶ್‌ ಕೂಡ ಆಗಮಿಸಲಿದ್ದಾರೆ. ಅದೇ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಜತೆ ಅವರು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತ್ಯಾಗಿ ಹೇಳಿದ್ದಾರೆ. ಮಹಾಮೈತ್ರಿ ಬಲವಾಗಿಯೇ ಇರಬೇಕು ಎಂದು ಹೇಳಿದ ತ್ಯಾಗಿ, ಎಲ್ಲರೂ ಅದನ್ನು ತಿಳಿದುಕೊಳ್ಳಬೇಕು ಎಂದು ಹೇಳುವ ಮೂಲಕ ತೇಜಸ್ವಿ ಯಾದವ್‌ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಬೇಕೆಂದು ಪರೋಕ್ಷ ವಾಗಿ ಆರ್‌ಜೆಡಿಗೆ ಸೂಚನೆ ನೀಡಿದ್ದಾರೆ. 

ನಿತೀಶ್‌ರಿಂದ ಬದಲಿ ಯೋಜನೆ ಸಿದ್ಧ?
ಏನೇನು ಪ್ರಯತ್ನ ಮಾಡಿದರೂ ಆರ್‌ಜೆಡಿ- ಕಾಂಗ್ರೆಸ್‌-ಜೆಡಿಯು ಅಂದರೆ ಮಹಾಮೈತ್ರಿಕೂಟ ಬಿಹಾರದಲ್ಲಿ ಪತನಗೊಂಡರೆ ಬದಲಿ ವ್ಯವಸ್ಥೆಗೆ ಸಿದ್ಧರಾಗಿದ್ದಾರೆ ನಿತೀಶ್‌. ಎರಡು ದಿನಗಳಿಂದ ಪಾಟ್ನಾದಲ್ಲಿ ನಡೆಯುತ್ತಿದ್ದ ಬಹಿರಂಗ ಹೇಳಿಕೆಗಳೆಲ್ಲ ಗುರುವಾರ ತಣ್ಣಗಾಗಿವೆ. ನಿತೀಶ್‌ ಕುಮಾರ್‌ ಕೂಡ ಗುರುವಾರ ಪಾಟ್ನಾದಲ್ಲಿಯೇ ಇದ್ದರು. ಜೆಡಿಯು ವಕ್ತಾರರಿಗೆ ಸುದ್ದಿಗೋಷ್ಠಿಗಳಲ್ಲಿ ಅಥವಾ ಇನ್ನು ಯಾವುದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮಾತನಾಡದಂತೆ ಸೂಚನೆ ನೀಡಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳೂ ಹೇಳಿವೆ. ಇವನ್ನೆಲ್ಲ ನೋಡಿದರೆ ನಿತೀಶ್‌ ಅವರು ಪ್ಲಾನ್‌ ಬಿ ರೆಡಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗುರುತರ ಆರೋಪಕ್ಕೆ ಗುರಿಯಾಗಿರುವ ಲಾಲು ಯಾದವ್‌ರ ಆರ್‌ಜೆಡಿ ನಾಯಕರ ಜತೆ ಎಷ್ಟು ದಿನಗಳ ಕಾಲ ಮೈತ್ರಿ ಮುಂದುವರಿಯಬೇಕು ಎಂದು ಜೆಡಿಯುನ ಇಬ್ಬರು ಹಿರಿಯ ನಾಯಕರು ಪ್ರಶ್ನಿಸಿದ್ದಾರೆ. ಇಷ್ಟು ಮಾತ್ರವಲ್ಲದೆ, ಜೆಡಿಯು ಬಿಹಾರ ಘಟಕದ ಅಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್‌ ಅವರು, ’14 ವರ್ಷದವನಿದ್ದಾಗಲೇ ಬಂದಿರುವಂಥ ಆರೋಪ ಗುರುತರವಾದದ್ದೇ’ ಎಂದು ತೇಜಸ್ವಿಗೆ ಹೇಳಿದ್ದಾರೆ.

Advertisement

ಬಿಹಾರದಲ್ಲಿ ಆರ್‌ಜೆಡಿ ಜತೆಗೆ ಮೈತ್ರಿಯನ್ನು ಮುಂದುವರಿ ಸಬೇಕೋ ಬೇಡವೋ ಎಂಬ ಬಗ್ಗೆ ನಿತೀಶ್‌ ಕುಮಾರ್‌ ಶೀಘ್ರವೇ ನಿರ್ಧರಿಸಬೇಕು. ಇಲ್ಲದಿದ್ದರೆ ಲಾಲು ಯಾದವ್‌ ಜೆಡಿಯು ಅನ್ನು ಒಡೆಯಲಿದ್ದಾರೆ ಎನ್ನುವುದು ಖಚಿತ.
– ರಾಮ್‌ ವಿಲಾಸ್‌ ಪಾಸ್ವಾನ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next