ಮುಂಬೈ/ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಬಹುಕಾಲದ ಮಿತ್ರಪಕ್ಷವಾಗಿದ್ದ ಎನ್ ಡಿಎ ಕೂಟದಿಂದ ಹೊರ ಬಂದ ಶಿವಸೇನಾ ಸೋಮವಾರ ಎನ್ ಸಿಪಿ, ಕಾಂಗ್ರೆಸ್ ಜತೆ ಮಾತುಕತೆ ನಡೆಸಿದೆ.
ಏತನ್ಮಧ್ಯೆ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಶಾಸಕರ ಜತೆ ಚರ್ಚೆ ನಡೆಸಿದ ಬಳಿಕ ಶಿವಸೇನಾ, ಎನ್ ಸಿಪಿ ಮೈತ್ರಿಕೂಟದ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ಸಮ್ಮತಿ ಸೂಚಿಸಿರುವುದಾಗಿ ವರದಿ ತಿಳಿಸಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ 56 ಸ್ಥಾನ, 7 ಮಂದಿ ಪಕ್ಷೇತರರು, ಎನ್ ಸಿಪಿಯ 54 ಹಾಗೂ ಕಾಂಗ್ರೆಸ್ ನ 44 ಶಾಸಕರು ಒಟ್ಟು 161 ಶಾಸಕರನ್ನು ಹೊಂದಿದಂತಾಗಿದೆ. ಬಿಜೆಪಿ 105 ಶಾಸಕರನ್ನು ಹೊಂದಿದೆ.
ರಾಜ್ಯದಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಶಿವಸೇನಾಕ್ಕೆ ಸರ್ಕಾರ ರಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲರು ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಮುಂಬೈ ಮತ್ತು ದೆಹಲಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಗರಿಗೆದರಿತ್ತು.
ಇಂದು ಸಂಜೆ 7ಗಂಟೆಯೊಳಗೆ ಅಂತಿಮ ನಿರ್ಧಾರವನ್ನು ತಿಳಿಸುವಂತೆ ರಾಜ್ಯಪಾಲರು ಶಿವಸೇನಾಗೆ ಅಂತಿಮ ಗಡುವು ನೀಡಿರುವುದಾಗಿ ವರದಿ ತಿಳಿಸಿದೆ. ಕಾಂಗ್ರೆಸ್ ತನ್ನ ನಿರ್ಧಾರವನ್ನು ರಾತ್ರಿ ಅಧಿಕೃತವಾಗಿ ಪ್ರಕಟಿಸುವುದಾಗಿ ಹೇಳಿದೆ.