ಬೆಂಗಳೂರು: ಸಿ.ಡಬ್ಲ್ಯು.ಸಿ ಸಭೆಯಲ್ಲಿ ಎಲ್ಲಾ ಸದಸ್ಯರಿಗೂ ಮಾತನಾಡಲು ಅವಕಾಶ ಕಲ್ಪಿಸಿ ಸುಧೀರ್ಘ ಚರ್ಚೆ ನಡೆಸಿದ್ದು ನನ್ನ ಅನುಭವದಲ್ಲಿ ಇದೇ ಮೊದಲು. ಆನಂದ್ ಶರ್ಮಾ, ಮುಕುಲ್ ವಾಸ್ನಿಕ್, ಕಪಿಲ್ ಸಿಬಲ್ ಎಲ್ಲರೂ ಪಕ್ಷನಿಷ್ಠರು. ಅವರ ಉತ್ತರದಲ್ಲೂ ಎಲ್ಲರೂ ಪಕ್ಷನಿಷ್ಠೆ ತೋರಿದ್ದಾರೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯಾರೂ ಸಹ ಸೋನಿಯಾ ಗಾಂಧಿಯವರ ನಾಯಕತ್ವದ ಪ್ರಶ್ನಿಸಿಲ್ಲ ಎಂದು ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಸೋಮವಾರ (24-8-2020) ನಡೆದ ಸಿ.ಡಬ್ಲ್ಯು.ಸಿ ಸಭೆಯ ಕುರಿತಾಗಿ ಮಾತನಾಡಿದ ಅವರು, ಕಲ್ಕತ್ತಾ ಅಧಿವೇಶನದ ನಂತರ ಇಲ್ಲಿಯವರೆಗೆ ಕಾರ್ಯಕಾರಿ ಸಮಿತಿ ಆಯ್ಕೆ, ಎಐಸಿಸಿ ಅಧಿವೇಶನ ನಡೆದಿರಲಿಲ್ಲ. ಇವೆಲ್ಲ ಸಂಪ್ರದಾಯದಂತೆ ನಡೆಯಬೇಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ಸೋನಿಯಾ ಗಾಂಧಿ ಅವರು ಪಕ್ಷದ ತಾಯಿಯ ಸ್ಥಾನದಲ್ಲಿದ್ದಾರೆ. ಅವರೇ ನಿನ್ನೆ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ.
ಪಕ್ಷ ಎಂದ ಮೇಲೆ ಅಡೆತಡೆಗಳು ಬರೋದು ಸಹಜ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಸ್ವತಃ ಸೋನಿಯಾ ಗಾಂಧಿ ಪ್ರಧಾನಿ ಸ್ಥಾನ ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಪಕ್ಷ ಕಟ್ಟಲು ಸೋನಿಯಾ ಗಾಂಧಿ ಶ್ರಮಿಸಿದ್ದಾರೆ.
ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಭಾರತದ ಸ್ಥಿತಿ ಹದಗೆಟ್ಟಿದೆ. ಜಿ.ಡಿ.ಪಿ. ನೆಲಕಚ್ಚಿದೆ. ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ಉದ್ಯೋಗ ನೀಡಿಲ್ಲ, ಮೋದಿ ಬಂದ ಮೇಲೆ ದೇಶ ಉದ್ಧಾರ ಆಗಿದೆ ಎಂಬಂತೆ ಮಾದ್ಯಮಗಳಲ್ಲಿ ಬಿಂಬಿತವಾಗುತ್ತಿದೆ. ವಾಜಪೇಯಿ ಅಧಿಕಾರದಲ್ಲಿದ್ದಾಗಲೂ ಈ ಸ್ಥಿತಿ ಇರಲಿಲ್ಲ. ಹೀಗಾದರೆ ಈ ದೇಶದ ಗತಿ ಏನಾಗಬೇಕು ? ಎಂದು ಪ್ರಶ್ನಿಸಿದ್ದಾರೆ.
ಸಿ.ಡಬ್ಲ್ಯು. ಸಿ ಸಭೆಯಲ್ಲಿ ಎಲ್ಲಾ 52 ಸದಸ್ಯರು ಭಾಗವಹಿಸಿ ಮಾತಾಡಿದ್ದಾರೆ. ಸಾಂಸ್ಥಿಕ ಚುನಾವಣೆಯ ನಂತರ ಮತ್ತೆ ರಾಹುಲ್ ಗಾಂಧಿ ಮತ್ತೆ ಎಐಸಿಸಿ ಅಧ್ಯಕ್ಷರಾಗುವ ವಾತಾವರಣ ಇದೆ. ಫೆಬ್ರವರಿ 12 ರಂದು ರಾಹುಲ್ ಗಾಂಧಿ ಒಂದು ಮಾತು ಹೇಳಿದರು- ಕೋವಿಡ್ ಚೀನಾದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಹೀಗಾಗಿ ಭಾರತಕ್ಕೆ ಬಾರದಂತೆ ತಡೆಯಲು ವೈಜ್ಞಾನಿಕ ಕ್ರಮ ಕೈಗೊಳ್ಳಿ ಅಂದರು. ಆದರೆ ಕೇಂದ್ರ ಆರೋಗ್ಯ ಸಚಿವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ರಾಹುಲ್ ಗಾಂಧಿಯವರು ದನಿ ಎತ್ತಿದಾಗ ಬಿಜೆಪಿಯವರು ಟೀಕೆ ಮಾಡಿದರು.
ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮವಹಿಸುವಲ್ಲಿ ವಿಫಲವಾಗಿದೆ. ಈಗ ಯುದ್ಧದ ಕಡೆ ಗಮನ ಕೊಡ್ತಿದ್ದಾರೆ. ನಾನೂ ಸಹ ಸಿ.ಡಬ್ಲ್ಯು.ಸಿ ಸಭೆಯಲ್ಲಿ ಇದ್ದೆ. ಆದರೆ ಎಲ್ಲೂ ಕೂಡ ರಾಹುಲ್ ಗಾಂಧಿ 23 ಹಿರಿಯ ನಾಯಕರು ಬಿಜೆಪಿ ಜತೆ ಕೈಜೋಡಿಸಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ಆದರೆ ರಾಹುಲ್ ಗಾಂಧಿ ಒಂದು ಮಾತು ಹೇಳಿದರು. ಸೋನಿಯಾ ಗಾಂಧಿಯವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ಸಮಯದಲ್ಲಿ ಈ ರೀತಿ ಪತ್ರ ಬರೆದದ್ದು ಯಾಕೆ ಅಂತ ಪ್ರಶ್ನೆ ಮಾಡಿ ಬೇಸರ ವ್ಯಕ್ತಪಡಿಸಿದರು. ರಾಹುಲ್ ಗಾಂಧಿಯವರೇ ಮೋದಿಯವರನ್ನುಎದುರಿಸಲು ಇರುವ ರೈಟ್ ಪರ್ಸನ್ ಎಂದು ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.