ಹೊಸದಿಲ್ಲಿ: ಚುನಾವಣೆಗಳಲ್ಲಿನ ಸತತ ಸೋಲಿನ ಹಿನ್ನೆಲೆಯಲ್ಲಿ ಕಂಗೆಟ್ಟಿರುವ ಪಕ್ಷವನ್ನು ಮತ್ತೆ ಹಿಂದಿನ ವೈಭವದ ಸ್ಥಿತಿಗೆ ತರಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಶತ ಪ್ರಯತ್ನ ಮಾಡುತ್ತಿದ್ದಾರೆ. ಅದ ಕ್ಕಾಗಿಯೇ 17 ಮಂದಿ ಹಿರಿಯ ನಾಯಕರ ನ್ನೊಳಗೊಂಡ ಚಿಂತನಾ ಸಮಿತಿ ರಚಿಸಿದ್ದಾರೆ. ಪ್ರಮುಖ ವಿಚಾರಗಳ ಬಗ್ಗೆ ಯಾವ ರೀತಿ ಕಾರ್ಯಯೋಜನೆ ರೂಪಿಸಬಹುದು ಎನ್ನುವುದರ ಬಗ್ಗೆ ಅದು ಸಲಹೆ ನೀಡಲಿದೆ.
ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್, ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಕಪಿಲ್ ಸಿಬಲ್, ಜಿ.ಎನ್. ಆಜಾದ್, ಜ್ಯೋತಿರಾದಿತ್ಯ ಸಿಂಧಿಯಾ, ಅಹ್ಮದ್ ಪಟೇಲ್, ರಾಹುಲ್ ಗಾಂಧಿ ಈ ಸಮಿತಿಯಲ್ಲಿ ಇರಲಿದ್ದಾರೆ. ಬಿಜೆಪಿ ಪ್ರತಿಪಾದಿಸುವ ಪ್ರಖರ ಹಿಂದುತ್ವ ಮತ್ತು ಇತರ ದೇಶಿಯ ವಿಚಾರಗಳ ಭರಾಟೆಯನ್ನೆದುರಿಸಲು ಈ ಸಮಿತಿ ಯೋಜನೆ ರೂಪಿಸಿದೆ.
ನಿಲುವು ಸ್ಪಷ್ಟಪಡಿಸಲು ಕ್ರಮ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವಿ.ಡಿ. ಸಾವರ್ಕರ್‌ಗೆ ಭಾರತ ರತ್ನ ನೀಡುವ ಬಗ್ಗೆ ಬಿಜೆಪಿ ಚುನಾವಣಾ ಪ್ರಣಾಳಿಕೆ ವಿಚಾರ ಕಾಂಗ್ರೆಸ್-ಎನ್‌ಸಿಪಿಗೆ ಪ್ರಬಲ ಸವಾಲು ತಂದೊಡ್ಡಿತ್ತು. ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಸಾವರ್ಕರ್‌ಗೆ ವಿರೋಧವಿಲ್ಲ ಆದರೆ ಅವರ ತತ್ವಗಳಿಗೆ ವಿರೋಧವಿದೆ ಎಂದು ಹೇಳಿದ್ದರು.
ಅಭಿಷೇಕ್ ಮನು ಸಿಂಘ್ವಿ ಅವರೂ ಸಾವರ್ಕರ್‌ಗೆ ಭಾರತರತ್ನ ನೀಡುವುದಕ್ಕೆ ಬೆಂಬಲ ಸೂಚಿಸಿ ಮಾತನಾಡಿದ್ದರು. ಇನ್ನೂ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಸಾವರ್ಕರ್ ವಿಚಾರ, 370ನೇ ವಿಧಿ ರದ್ದು ವಿಚಾರ ಸಂಬಂಧ ಒಬೊಬ್ಬ ನಾಯಕರು ಭಿನ್ನ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಮೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಂಥ ವಿಚಾರಗಳು ಬಂದಾಗ, ಪಕ್ಷವು ಸ್ಪಷ್ಟ ನಿಲುವನ್ನು ಕೈಗೊಳ್ಳುವ ಕುರಿತೂ ಈ ಸಮಿತಿ ನಿರ್ಧರಿಸಲಿದೆ.
ದಿಲ್ಲಿ ಕಾಂಗ್ರೆಸ್‌ಗೆ ಸುಭಾಶ್ ಅಧ್ಯಕ್ಷ
ದಿಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಹಿರಿಯ ನಾಯಕ ಸುಭಾಶ್ ಛೋಪ್ರಾರನ್ನು ನೇಮಿ ಸಲಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಕೀರ್ತಿ ಆಝಾದ್‌ರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹೊಸದಿಲ್ಲಿಯ ಕಾಲ್ಕಜಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಛೋಪ್ರಾ ಈ ಹಿಂದೆ ದಿಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಇದ್ದರು. ಮುಂದಿನ ವರ್ಷ ನಡೆಯಲಿರುವ ದಿಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ನೇಮಕ ಗಮನಾರ್ಹ.