Advertisement

ಸವಾಲಿನ ದಿನಗಳು ಮುಂದಿವೆ; ಒಗ್ಗಟ್ಟು ಮುಖ್ಯ: ಸೋನಿಯಾ ಗಾಂಧಿ ಕರೆ

07:54 PM Apr 05, 2022 | Team Udayavani |

ನವದೆಹಲಿ: “ಪಕ್ಷಕ್ಕೆ ಹಿಂದೆಂದಿಗಿಂತಲೂ ಅತ್ಯಂತ ಸವಾಲಿನ ದಿನಗಳು ಮುಂದಿವೆ. ಇಂತಹ ಸನ್ನಿವೇಶದಲ್ಲಿ ಪಕ್ಷದ ಎಲ್ಲ ಹಂತಗಳಲ್ಲಿಯೂ ಒಗ್ಗಟ್ಟು ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ.’ಇದು ಕಾಂಗ್ರೆಸ್‌ ಸಂಸದೀಯ ಪಕ್ಷ(ಸಿಪಿಪಿ)ದ ಸಭೆಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಡಿರುವ ಮಾತು.

Advertisement

ಮಂಗಳವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ ಆಡಳಿತಾರೂಢ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, “ಎಲ್ಲ ರಾಜ್ಯಗಳಲ್ಲೂ ಬಿಜೆಪಿಯ ವಿಭಜನಾತ್ಮಕ ಅಜೆಂಡಾ ರಾಜಕೀಯ ಸ್ವರೂಪವನ್ನೇ ಬದಲಾಯಿಸುತ್ತಿದೆ. ತನ್ನ ಈ ಅಜೆಂಡಾವನ್ನು ಸಾಧಿಸಲು ಬಿಜೆಪಿಯು ಇತಿಹಾಸವನ್ನೇ ಹಾನಿಕಾರಕವಾಗಿ ತಿರುಚುತ್ತಿದೆ’ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಮುಗಿದ ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಹೀನಾಯ ಪ್ರದರ್ಶನದ ಕುರಿತೂ ಪ್ರಸ್ತಾಪಿಸಿದ ಅವರು, “ಆ ಫ‌ಲಿತಾಂಶವು ಆಘಾತಕಾರಿ ಹಾಗೂ ದುಃಖದಾಯಕವಾಗಿತ್ತು. ನೀವೆಲ್ಲರೂ ಎಷ್ಟು ನಿರಾಶರಾಗಿದ್ದೀರಿ ಎಂಬುದು ನನಗೆ ಗೊತ್ತು’ ಎಂದಿದ್ದಾರೆ.

ಜಿ-23 ನಾಯಕರಿಗೆ ಸಂದೇಶ:
ಇದೇ ವೇಳೆ, ಜಿ 23 ನಾಯಕರಿಗೂ ಸಂದೇಶ ರವಾನಿಸಿದ ಸೋನಿಯಾ, “ಪಕ್ಷವನ್ನು ಹೇಗೆ ಬಲಪಡಿಸಬೇಕು ಎಂಬ ಬಗ್ಗೆ ಹಲವು ಸಲಹೆಗಳು ಬಂದಿವೆ. ಆ ಪೈಕಿ ಹಲವು ಸಲಹೆಗಳು ಸಮಂಜಸವಾಗಿದ್ದು, ಆ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ’ ಎಂದಿದ್ದಾರೆ. ಜತೆಗೆ, ಪಕ್ಷದ ಪುನಶ್ಚೇತನವು ಕೇವಲ ನಮಗೆ ಮಾತ್ರ ಮುಖ್ಯವಲ್ಲ. ಅದು ನಮ್ಮ ಪ್ರಜಾಸತ್ತೆಗೆ ಹಾಗೂ ನಮ್ಮ ಸಮಾಜಕ್ಕೆ ಬಹಳ ಅಗತ್ಯವಿದೆ. ಮುಂದಿನ ಹಾದಿ ಬಹಳ ಕಷ್ಟಕರವಾಗಿದೆ. ನಮ್ಮ ಬದ್ಧತೆ, ದೃಢ ನಿಶ್ಚಯ ಹಾಗೂ ಪುಟಿದೇಳಬಲ್ಲ ಸಾಮರ್ಥ್ಯವು ಗಂಭೀರ ಪರೀಕ್ಷೆಗೆ ಒಳಪಟ್ಟಿದೆ ಎಂದಿದ್ದಾರೆ.

ಇದನ್ನೂ ಓದಿ:ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಶಿರಸಿಗೆ 644 ಸ್ಲಂ ಬೋರ್ಡ್ ಮನೆ ಮಂಜೂರು : ಕಾಗೇರಿ

Advertisement

ಕಾಂಗ್ರೆಸ್‌ಗೆ ಅಹ್ಮದ್‌ ಪಟೇಲ್‌ ಪುತ್ರ ಗುಡ್‌ಬೈ?
ಗಾಂಧಿ ಪರಿವಾರಕ್ಕೆ ನಿಷ್ಠರಾಗಿದ್ದ ಕಾಂಗ್ರೆಸ್‌ ಹಿರಿಯ ನಾಯಕ ದಿವಂಗತ ಅಹ್ಮದ್‌ ಪಟೇಲ್‌ ಅವರ ಪುತ್ರ ಫೈಸಲ್‌ ಪಟೇಲ್‌ ಕಾಂಗ್ರೆಸ್‌ ತೊರೆಯಲಿದ್ದಾರೆಯೇ? ಅವರೇ ಇಂಥದ್ದೊಂದು ಸುಳಿವನ್ನು ನೀಡಿದ್ದಾರೆ. “ನನಗೆ ಪಕ್ಷದ ನಾಯಕತ್ವದಿಂದ ಯಾವುದೇ ಬೆಂಬಲ ದೊರೆಯುತ್ತಿಲ್ಲ. ಹೀಗೇ ಮುಂದುವರಿದರೆ ನನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ನಾನು ಕಾಂಗ್ರೆಸ್‌ನಾಚೆಗೆ ನೋಡಲೇಬೇಕಾಗುತ್ತದೆ’ ಎಂದು ಫೈಸಲ್‌ ಪಟೇಲ್‌ ಹೇಳಿದ್ದಾರೆ. ಗುಜರಾತ್‌ ಅಸೆಂಬ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಫೈಸಲ್‌ ಇಂಥದ್ದೊಂದು ಬಾಂಬ್‌ ಸಿಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರಿದ್ದರೂ, ಇಲ್ಲದಿದ್ದರೂ ಆ ಪಕ್ಷವು ಗಾಂಧಿ ಪರಿವಾರದಾಚೆಗೆ ನೋಡುವುದೇ ಇಲ್ಲ. ಇತ್ತೀಚೆಗೆ ನಡೆದ ಉ.ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ
-ಅನುರಾಗ್‌ ಠಾಕೂರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next