ಹೊಸದಿಲ್ಲಿ: ಕಾಂಗ್ರೆಸ್‌ನ ನಾಯಕತ್ವದ ವಿಚಾರದಲ್ಲಿ ಪಕ್ಷದ ಹಿರಿಯ ನಾಯಕರೇ ಬಂಡಾಯವೆದ್ದ 4 ತಿಂಗಳ ಬಳಿಕ ಈಗ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಶನಿವಾರ ಮಹತ್ವದ ಸಭೆ ಕರೆದಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿ ಭಟನೆಯಿಂದಾಗಿ ಉಂಟಾ ಗಿರುವ ರಾಜಕೀಯ ಬೆಳವ ಣಿಗೆಗಳು, ಪಕ್ಷ ಸಂಘಟನೆ, ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ಹೊರಹಾಕಿದ್ದ ಹಿರಿಯ ನಾಯಕರೊಂದಿಗೆ ಸಂಧಾನ ಸೇರಿದಂತೆ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ವಿಶೇಷವೆಂದರೆ, ಮುಂದಿನ 10 ದಿನಗಳ ಕಾಲ ಈ ಮಾತುಕತೆ ಮುಂದುವರಿಯಲಿದೆ.
ಪಕ್ಷಕ್ಕೆ ಪೂರ್ಣ ಪ್ರಮಾಣದ, ಸಕ್ರಿಯ, ಪರಿಣಾಮಕಾರಿ ನಾಯ ಕತ್ವದ ಅಗತ್ಯವಿದೆ ಎಂದೂ, ಪಕ್ಷದೊಳಗೆ ದೊಡ್ಡ ಮಟ್ಟದ ಬದಲಾ ವಣೆಯೂ ಆಗಬೇಕಿದೆ ಎಂದು ಆಗಸ್ಟ್ ತಿಂಗಳಲ್ಲಿ ಪತ್ರ ಬರೆದಿದ್ದ 23 ಮಂದಿ ಹಿರಿಯ ನಾಯಕರ ಪೈಕಿ ಕೆಲವರು ಶನಿವಾರ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಡಾಯ ನಾಯಕರ ಮನವೊಲಿಸಲು ಹೈಕಮಾಂಡ್ ನಡೆಸುತ್ತಿರುವ ಮೊದಲ ಯತ್ನ ಇದಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾರ್ಯಾರು ಭಾಗಿ?: ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಇತರೆ ನಾಯಕರಾದ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್, ಮನೀಷ್ ತಿವಾರಿ, ಶಶಿ ತರೂರ್, ಭೂಪಿಂದರ್ ಸಿಂಗ್ ಹೂಡಾ, ಪೃಥ್ವಿರಾಜ್ ಚವಾಣ್, ಚಿದಂಬರಂ, ಆ್ಯಂಟನಿ, ಕೆ.ಸಿ.ವೇಣುಗೋಪಾಲ್ ಅವರು ಭಾಗಿಯಾಗುವ ನಿರೀಕ್ಷೆಯಿದೆ.
ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡು ಚುನಾವಣೆಯಲ್ಲಿನ ಸಂಭಾವ್ಯ ಮೈತ್ರಿ, ರೈತರ ಪ್ರತಿಭಟನೆ, ಚಳಿಗಾಲದ ಅಧಿವೇಶನ ರದ್ದು, ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತಿತರ ವಿಚಾರಗಳೂ ಚರ್ಚೆಯ ವೇಳೆ ಪ್ರಸ್ತಾಪವಾಗುವ ನಿರೀಕ್ಷೆಯಿದೆ ಎಂದೂ ಪಕ್ಷದ ಮೂಲಗಳು ಹೇಳಿವೆ.