ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ (ಜುಲೈ 21) ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗಿದ್ದು, ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಆ ಜಮೀರ್ ಗೆ ಉತ್ತರ ಕೊಡಲು ನಾನು ತಯಾರಿಲ್ಲ..: ಸ್ವಪಕ್ಷದ ಶಾಸಕನ ವಿರುದ್ಧ ಡಿಕೆಶಿ ಅಸಮಾಧಾನ
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ಕೇಳಲಾಗುವ ಪ್ರಶ್ನೆಗೆ ಸೋನಿಯಾ ಗಾಂಧಿ ನೀಡಲಿರುವ ಉತ್ತರವನ್ನು ಲಿಖಿತವಾಗಿ ಅಥವಾ ಕಂಪ್ಯೂಟರ್ ನಲ್ಲಿ ದಾಖಲಿಸಿಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.
ಕೆಲ ದಿನಗಳ ಹಿಂದೆ, ಅವರು ಕೋವಿಡ್ ಗೆ ತುತ್ತಾದ ಹಿನ್ನೆಲೆಯಲ್ಲಿ ಇ.ಡಿ. ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ. ಹಾಗಾಗಿ, ಅವರಿಗೆ ಕೆಲ ದಿನಗಳ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿತ್ತು. ಅನಾರೋಗ್ಯದಿಂದ ಅವರು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಹೊಸ ನೋಟಿಸ್ ಜಾರಿಗೊಳಿಸಿದ್ದ ಇ.ಡಿ., ಜು. 21ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಕಾಂಗ್ರೆಸ್ ಪ್ರತಿಭಟನೆ: ಸೋನಿಯಾ ವಿಚಾರಣೆ ಖಂಡಿಸಿ, ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಮುಂಬೈ, ಕೋಲ್ಕತಾ, ಹೈದರಾಬಾದ್, ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗೆ, ರಾಹುಲ್ ಗಾಂಧಿಯವರು ವಿಚಾರಣೆಗೆ ಹಾಜರಾದಾಗಲೂ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗಿತ್ತು.