Advertisement

ಕಾಂಗ್ರೆಸ್‌ಗಿಲ್ಲ ಸೋನಿಯಾ ಪ್ರಚಾರ

03:45 AM Feb 01, 2017 | |

ನವದೆಹಲಿ: ಪಂಚರಾಜ್ಯಗಳ ಚುನಾವಣಾ ಪ್ರಚಾರ­ದಿಂದ ಸೋನಿಯಾ ಗಾಂಧಿ ದೂರ ಉಳಿಯಲಿದ್ದು, ಪಕ್ಷದ ಸಂಪೂರ್ಣ ಹೊಣೆಯನ್ನು ನಂ.2 ನೇತಾರ ರಾಹುಲ್‌ ಗಾಂಧಿ ಅವರ ಹೆಗಲಿಗೇರಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

ಅನಾರೋಗ್ಯದ ಹಿನ್ನೆಲೆ­ಯಲ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆ­ ಸ್‌ನ ಯಾವುದೇ ಸಭೆ ಸಮಾರಂಭಗಳಲ್ಲೂ ಸೋನಿಯಾಗಾಂಧಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾ­ಗಿದೆ. ಚುನಾವಣಾ ಪ್ರಚಾರ­ಕ್ಕೆಂದೇ 40 ಮುಖಂಡರ ಪಟ್ಟಿಯನ್ನು ಸ್ವತಃ ಸೋನಿಯಾ ಅವರೇ ಸಿದ್ಧಪಡಿಸಿದ್ದು, ಬಹುಪಾಲು ಹೊಣೆಯನ್ನು ರಾಹುಲ್‌ಗೆ ವಹಿಸಿದ್ದಾರೆ. 

 ಉತ್ತರ ಪ್ರದೇಶದಲ್ಲಿ ಎಸ್ಪಿ- ಕೈ ಮೈತ್ರಿ ಇನ್ನೇನು ಕುಸಿಯುತ್ತದೆ ಎನ್ನುವಾಗಲೂ ಸೋನಿಯಾ ಅಲ್ಲಿ ಸಂಧಾನಕ್ಕೆ ನೇರವಾಗಿ ಮಧ್ಯಸ್ಥಿಕೆ ವಹಿಸಿರಲಿಲ್ಲ. ಪ್ರಿಯಾಂಕಾ ಗಾಂಧಿ ಅವರನ್ನು ಕಳುಹಿಸಿಕೊಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಕಾಂಗ್ರೆಸ್‌ನ ಉನ್ನತ ಸ್ಥಾನಗಳ ಆಯ್ಕೆಗೆ ಕೇಂದ್ರ ಚುನಾವಣಾ ಆಯೋಗ ಗಡವು ನೀಡಿದ್ದು, “ಜುಲೈ 15ರ ಒಳಗಾಗಿ ಪಕ್ಷದ ಮೇಲ್ಮಟ್ಟದ ಸ್ಥಾನಗಳಿಗೆ ಚುನಾವಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಮುಂದೂಡುವಂತಿಲ್ಲ’ ಎಂದು ಹೇಳಿದೆ. 2010ರಲ್ಲಿ ಪಕ್ಷದ ಉನ್ನತ ಸ್ಥಾನಗಳ ಆಯ್ಕೆ ನಡೆದಿತ್ತು. 1998ರಿಂದ ಪಕ್ಷದ ಉಸ್ತುವಾರಿಯನ್ನು ಸೋನಿಯಾಗಾಂಧಿ ಅವರೇ ವಹಿಸುತ್ತಿದ್ದಾರೆ.

ರಾಯ್‌ಬರೇಲಿ, ಅಮೇಥಿಗಷ್ಟೇ ಪ್ರಿಯಾಂಕಾ ಪ್ರಚಾರ
ಉತ್ತರ ಪ್ರದೇಶದಲ್ಲಿ ಎಸ್ಪಿ ಹಾಗೂ ಕಾಂಗ್ರೆಸ್‌ ಮೈತ್ರಿಗೆ ಪ್ರಿಯಾಂಕಾ ಗಾಂಧಿ ಶ್ರಮಿಸಿದ್ದರೂ, ಅವರ ಪ್ರಚಾರ ಕ್ಷೇತ್ರಗಳು ಕೇವಲ ಅಮೇಥಿ ಮತ್ತು ರಾಯ್‌ಬರೇಲಿ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿದೆ. “ಪ್ರಿಯಾಂಕಾ ಸ್ವಇಚ್ಚೆಯಿಂದಲೇ ರಾಜಕೀಯಕ್ಕೆ ಆಗಮಿಸಿದ್ದಾರೆ. ಆದರೆ, ಈಗ ಮಾತ್ರ ಸೋನಿಯಾ ಗಾಂಧಿ ಕ್ಷೇತ್ರ ರಾಯ್‌ಬರೇಲಿ ಹಾಗೂ ರಾಹುಲ್‌ ಗಾಂಧಿ ಅವರ ಅಮೇಥಿ ಕ್ಷೇತ್ರದಲ್ಲಷ್ಟೇ ಚುನಾವಣಾ ಪ್ರಚಾರ ಮಾಡಲಿದ್ದಾರೆ. 

Advertisement

ಮಾ.11ರ ಬಳಿಕ ಶಿವಪಾಲ್‌ ಹೊಸ ಪಕ್ಷ
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಸೋದರ ಶಿವಪಾಲ್‌ ಸಿಂಗ್‌ ಯಾದವ್‌ ಈಗ ಸಿಎಂ ಅಖೀಲೇಶ್‌ ಯಾದವ್‌ಗೆ ಹೊಸ ಶಾಕ್‌ ಕೊಟ್ಟಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯ ಫ‌ಲಿತಾಂಶದ ಬಳಿಕ ತಾವು ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. “ನನ್ನ ಉಸಿರಿನ ಕೊನೆಯ ತನಕ ನಾನು ಮುಲಾಯಂ ಅವರಿಗೆ ನಿಷ್ಠನಾಗಿರುತ್ತೇನೆ. ಅಖೀಲೇಶ್‌ ರೀತಿ ದ್ರೋಹ ಬಗೆಯುವುದಿಲ್ಲ. ಅಖೀಲೇಶ್‌ ಸರ್ಕಾರ ರಚಿಸಲಿ, ನಾನು ಹೊಸ ಪಕ್ಷ ಕಟ್ಟುತ್ತೇನೆ. ಮಾರ್ಚ್‌ 11ಕ್ಕೆ ಫ‌ಲಿತಾಂಶ ಬರುವ ವೇಳೆಗೆ ನಾನು ಹೊಸ ಪಕ್ಷಕ್ಕೆ ಮುನ್ನುಡಿ ಹಾಡುತ್ತೇನೆ’ ಎಂದಿರುವ ಅವರು, ಎಸ್ಪಿ- ಕಾಂಗ್ರೆಸ್‌ ಮೈತ್ರಿಯ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸದೇ ಇರಲು ನಿರ್ಧರಿಸಿದ್ದಾರೆ. ಎಸ್ಪಿಯ ಬಂಡಾಯ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ಶಿವಪಾಲ್‌ ಅವರ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಅಖೀಲೇಶ್‌, “ನಮ್ಮ ಇಡೀ ಕುಟುಂಬ ಯಾವತ್ತೂ ಒಂದೇ. ನಾನು ನೇತಾಜಿ (ಮುಲಾಯಂ) ಹಾಗೂ ಅವರ ಆಪ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದಷ್ಟೇ ಹೇಳಿ, ಯಾದವ ಮತದಾರರಲ್ಲಿ ಗೊಂದಲ ಸೃಷ್ಟಿಯಾಗದಂತೆ ಪ್ರಚಾರ ನಡೆಸುತ್ತಿದ್ದಾರೆ. 

ಕಾಶ್ಮೀರಕ್ಕಿಂತ ಭಿನ್ನವಿಲ್ಲ ಎಂದ ಬಿಜೆಪಿ ಸಂಸದ
ಉತ್ತರ ಪ್ರದೇಶದ ಪಶ್ಚಿಮ ಭಾಗದ ಕೈರಾಣಾ ಮತ್ತಿತರ ಪ್ರದೇಶಗಳಲ್ಲಿ 1990ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಇದ್ದಂಥ ಪರಿಸ್ಥಿತಿ ಇತ್ತು ಎಂದು ಗೋರಖ್‌ಪುರ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದಾರೆ. ಅಪರಾಧ, ಗೂಂಡಾರಾಜ್ಯ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಹಿಂದುಗಳು ಈ ಪ್ರದೇಶದಿಂದ ಬೇರೆಡೆಗೆ ತೆರಳುವಂತಾಗಿದೆ ಎಂದು ಅವರು ಗಾಜಿಯಾಬಾದ್‌ನಲ್ಲಿ ಮಾತನಾಡುತ್ತಾ ತಿಳಿಸಿದ್ದಾರೆ. 1990ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಿದ್ದರಿಂದ ಕಾಶ್ಮೀರಿ ಪಂಡಿತರು ಆ ರಾಜ್ಯ ತೊರೆಯಬೇಕಾಯಿತು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next