Advertisement

ಕನ್ನಡಾಭಿಮಾನದ ಹಾಡು-ಹಬ್ಬ

08:30 AM Nov 02, 2019 | mahesh |

ಕನ್ನಡ ನಾಡು-ನುಡಿ ಕುರಿತು ಅಭಿಮಾನ ತೋರ್ಪಡಿಸಲು ದೊರೆತ ಅತಿ ಚಿಕ್ಕ ಅವಕಾಶವನ್ನೂ ನಮ್ಮ ಚಿತ್ರರಂಗದ ನಿರ್ಮಾಪಕ-ನಿರ್ದೇಶಕರು, ಸಾಹಿತಿಗಳು, ನಟ-ನಟಿಯರು ಬಿಡಲಿಲ್ಲ ಎಂಬುದು ಹೆಮ್ಮೆ ಮತ್ತು ಅಭಿಮಾನದ ಸಂಗತಿ. ಈ ಅಭಿಮಾನದ ಫ‌ಲವಾಗಿಯೇ ಕನ್ನಡ ನಾಡಿನ ಕುರಿತು ಸಾಕಷ್ಟು ಹಾಡುಗಳು ಬಂದಿವೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೆರೆದ ಕೆಲವು ಹಾಡುಗಳ ಪಲ್ಲವಿಯನ್ನು ಇಲ್ಲಿ ನೀಡಲಾಗಿದೆ..

Advertisement

ಕನ್ನಡಿ­ಗರಿಗೆ ರಾಜ್ಯೋ­ತ್ಸವ ಸಂಭ್ರಮ…
-ಕನ್ನಡದ ಬಾವುಟ ಬಲು ಅಬ್ಬರದಿಂದ, ವೈಭವದಿಂದ ನಾಡಿನಾದ್ಯಂತ ಹಾರಾಡುವ ಮಾಸವಿದು. ಈ ಸಂದರ್ಭದಲ್ಲಿ ನಮ್ಮ ಕಿವಿಗೆ ಕನ್ನಡದ ಕುರಿತಾದ, ಕನ್ನಡ ನೆಲ-ಜಲದ ಮಹತ್ವವನ್ನು ಸಾರುವ ಸಾಕಷ್ಟು ಹಾಡುಗಳು ಕೇಳಿಸುತ್ತವೆ. ಆ ಹಾಡುಗಳನ್ನು ಕೇಳುತ್ತಿದ್ದರೆ ಮೈ ಜುಮ್ಮೆನ್ನುತ್ತದೆ, ಈ ನಾಡಿನ ಬಗ್ಗೆ ಹೆಮ್ಮೆ ಎನಿಸುತ್ತದೆ. ಈ ರೀತಿ ಕನ್ನಡದ ಹೆಮ್ಮೆಯ ಹಾಡುಗಳನ್ನು ನೀಡಿದ ಕೀರ್ತಿ ಕನ್ನಡ ಚಿತ್ರರಂಗದ್ದು. ಅಂದಿನಿಂದ ಇಂದಿನವರೆಗೆ ಕನ್ನಡಕ್ಕೆ, ಕನ್ನಡ ಭಾಷೆ ಬೆಳೆಯುವಲ್ಲಿ ಕನ್ನಡ ಚಿತ್ರರಂಗ ತನ್ನದೇ ಆದ ಮಹತ್ವದ ಕೊಡುಗೆ ನೀಡುತ್ತಾ ಬಂದಿದೆ. ನಾಡು-ನುಡಿಯ ವಿಷಯ ಬಂದಾಗಲೆಲ್ಲ ಕನ್ನಡ ಚಿತ್ರರಂಗ ಅದಕ್ಕೆ ತೀವ್ರವಾಗಿ ಸ್ಪಂದಿಸಿದೆ. ಕನ್ನಡ ಚಿತ್ರರಂಗ ತುಳಿದ ಹಾದಿಯನ್ನು, ನಾಡಪ್ರೇಮ ತೋರ್ಪಡಿಸುವ ವಿಷಯದಲ್ಲಿ ಅದು ತೋರಿದ ಉತ್ಸಾಹವನ್ನು ಮೆಚ್ಚದೇ ಇರಲು ಸಾಧ್ಯವೇ ಇಲ್ಲ. ಒಂದು ಸಿನಿಮಾದ ಕಥೆ ಏನೇ ಇರಬಹುದು, ಅದರ ಬಜೆಟ್‌ ಎಷ್ಟೇ ಆಗಿರಬಹುದು, ಜೊತೆಗೆ ಆ ಸಿನಿಮಾ ಯಶಸ್ವಿಯಾಗದೆಯೂ ಇರಬಹುದು….ಆದರೆ, ಕನ್ನಡ ನಾಡು-ನುಡಿ ಕುರಿತು ಅಭಿಮಾನ ತೋರ್ಪಡಿಸಲು ದೊರೆತ ಅತಿ ಚಿಕ್ಕ ಅವಕಾಶವನ್ನೂ ನಮ್ಮ ಚಿತ್ರರಂಗದ ನಿರ್ಮಾಪಕ-ನಿರ್ದೇಶಕರು, ಸಾಹಿತಿಗಳು, ನಟ-ನಟಿಯರು ಬಿಡಲಿಲ್ಲ ಎಂಬುದು ಹೆಮ್ಮೆ ಮತ್ತು ಅಭಿಮಾನದ ಸಂಗತಿಯೇ ನಿಜ.

ಬೆಳ್ಳಿತೆರೆಯ ಮೇಲೆ ಮೊದಲಿಗೆ ಕನ್ನಡದ ಹಾಡು ಕೇಳಿಸಿದವರು ಬಹುಶಃ ಜಿ. ವಿ. ಅಯ್ಯರ್‌. “ಕುಲವಧು’ ಚಿತ್ರಕ್ಕಾಗಿ ಅವರು ಬರೆದ “ಕನ್ನಡದ ಕುಲದೇವಿ ಕಾಪಾಡು ಬಾ ತಾಯೇ..’ ಎಲ್ಲರ ನಿರೀಕ್ಷೆ ಮೀರಿ ಜನಪ್ರಿಯವಾಯಿತು. ಆನಂತರದಲ್ಲಿ ಅಯ್ಯರ್‌ ಒಂದೊಂದೇ ಹೊಸ ಹಾಡುಗಳನ್ನು ಕೊಡುತ್ತಲೇ ಹೋದರು. ಮುಂದೆ ಕನ್ನಡಿಗರ ಸ್ವಾಭಿಮಾನದ ಸಂಕೇತದಂತೆ ತೆರೆಗೆ ಬಂದದ್ದು, “ಶ್ರೀಕೃಷ್ಣ ದೇವರಾಯ’ ಸಿನಿಮಾ. ಆ ನಂತರ “ಮಯೂರ’, “ಇಮ್ಮಡಿ ಪುಲಿಕೇಶಿ’, “ರಣಧೀರ ಕಂಠೀರವ’ ಚಿತ್ರಗಳೂ ಬೆಳ್ಳಿತೆರೆಗೆ ಬಂದವು. ಕರ್ನಾಟಕದ ವೈಭವವನ್ನು ಮನೆಮನೆಗೂ ದಾಟಿಸಿದವು.

ಇನ್ನು, ಕನ್ನಡ ಚಿತ್ರರಂಗದ ಕನ್ನಡ ಪ್ರೇಮದ ಬಗ್ಗೆ ಹೇಳಲು ಹೊರಟಾಗ ಕನ್ನಡದ ಚಿತ್ರ ಸಾಹಿತಿಗಳ ಕುರಿತಿ ಹೇಳಲೇ ಬೇಕು. ಜಿ.ವಿ.ಅಯ್ಯರ್‌, ಕು.ರ.ಸೀತಾರಾಮ ಶಾಸ್ತ್ರಿ, ವಿಜಯ ನಾರಸಿಂಹ, ದೊಡ್ಡ ರಂಗೇಗೌಡ, ಕಣಗಾಲ್‌ ಪ್ರಭಾಕರ ಶಾಸ್ತ್ರಿ, ಆರ್‌.ಎನ್‌. ಜಯಗೋಪಾಲ್‌, ಚಿ.ಉದಯಶಂಕರ್‌, ದೊಡ್ಡ ರಂಗೇಗೌಡ, ಸಿ.ವಿ. ಶಿವ ಶಂಕರ್‌, ಹಂಸಲೇಖ ಮಾತ್ರವಲ್ಲದೆ, ಇತ್ತೀಚೆಗೆ ಹೆಸರು ಮಾಡಿರುವ, ಮಾಡುತ್ತಿರುವ ಗೀತ ಸಾಹಿತಿಗಳೆಲ್ಲ ಬೆಳ್ಳಿ ತೆರೆಯ ಮೇಲೆ ಕನ್ನಡದ ದೀಪ ಹಚ್ಚುವ ಕೆಲಸವನ್ನು ಸಂಭ್ರಮದಿಂದಲೇ ಮಾಡಿದ್ದಾರೆ. ಈ ಒಂದು ವಿಷಯದಲ್ಲಿ, ಕನ್ನಡ ಚಿತ್ರರಂಗ ಆರಂಭದ ದಿನದಿಂದ ಇವತ್ತಿನವರೆಗೂ ಒಗ್ಗಟ್ಟು ಪ್ರದರ್ಶಿಸಿದೆ. ಕನ್ನಡ ಪ್ರೇಮದ ಹಾಡುಗಳ ಬಗ್ಗೆ ಹೇಳುವುದಾದರೆ “ಕನ್ನಡದ ಕುಲದೇವಿ …’ ಎಂದು ಆರಂಭಿಸಿ, “ಅಆಇಈ ಕನ್ನಡದಾ ಅಕ್ಷರಮಾಲೆ’, “ಇದೇ ನಾಡು ಇದೇ ಭಾಷೆ’, “ಎಂದೆಂದೂ ನನ್ನದಾಗಿರಲಿ’, “ನಾವಾಡುವ ನುಡಿಯೇ ಕನ್ನಡನುಡಿ’, “ಕೇಳಿಸದೆ ಕಲ್ಲುಕಲ್ಲಿನಲಿ ಕನ್ನಡನುಡಿ’, “ನಾಡಚರಿತೆ ನೆನಪಿಸುವಾ ವೀರಗೀತೆಯಾ’, “ಈ ನಮ್ಮ ನಾಡು ಚಂದವೋ’, “ಕರುನಾಡತಾಯಿ ಸದಾ ಚಿನ್ಮಯಿ’….ಎಂದೆಲ್ಲಾ ಹಾಡಿಕೊಂಡೇ ಬೆಳೆದವರು ನಾವು. ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು… ಇಂತಹ ಸಾಕಷ್ಟು ಸಾಲುಗಳು ಹಾಡುಗಳು ಕನ್ನಡಿಗರ ಮನತಣಿಸಿವೆ, ನಾಡಿನ ಬಗ್ಗೆ ಹೆಮ್ಮೆ ಮೂಡಿಸಿವೆ. ಇನ್ನು, ಕನ್ನಡದ ಕುರಿತಾದ ಯಾವುದೇ ಹೋರಾಟವಿರಲಿ, ಕನ್ನಡ ಚಿತ್ರರಂಗ ಅದಕ್ಕೆ ನಿರಂತರವಾಗಿ ಬೆಂಬಲ ನೀಡುತ್ತಲೇ ಬಂದಿದೆ.

ಚಿತ್ರ: ಸೋಲಿಲ್ಲದ ಸರದಾರ
ಸಾಹಿತ್ಯ -ಸಂಗೀತ: ಹಂಸಲೇಖ
ಗಾಯಕರು: ಎಸ್‌.ಪಿ.ಬಿ
ತಾರಾಗಣ: ಅಂಬರೀಶ್‌,
ಮಾಲಾಶ್ರೀ, ಭವ್ಯ

Advertisement

ಕನ್ನಡ, ರೋಮಾಂಚನವೀ ಕನ್ನಡ
ಕಸ್ತೂರಿ ನುಡಿಯಿದು,
ಕರುಣಾಳು ಮಣ್ಣಿದು
ಚಿಂತಿಸು, ವಂದಿಸು,
ಪೂಜಿಸು, ಪೂಜಿಸು

ಈ ಕನ್ನಡ ಮಣ್ಣನು ಮರಿಬೇಡ
ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು
ಜರಿಬೇಡ
ಓ ಅಭಿಮಾನಿ,
ಓ ಅಭಿಮಾನಿ

ಚಿತ್ರ: ಗಂಧದ ಗುಡಿ
ಸಾಹಿತ್ಯ: ಚಿ.ಉದಯ್‌ಶಂಕರ್‌
ಸಂಗೀತ: ರಾಜನ್‌ ನಾಗೇಂದ್ರ
ಗಾಯಕರು: ಪಿ.ಬಿ.ಶ್ರೀನಿವಾಸ್‌
ತಾರಾಗಣ: ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಕಲ್ಪನಾ
ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ

ಚಿತ್ರ: ಕಣ್ತೆರೆದು ನೋಡು
ಸಾಹಿತ್ಯ: ಜಿ.ವಿ.ಅಯ್ಯರ್‌
ಸಂಗೀತ-ಗಾಯಕರು: ಜಿ.ಕೆ.ವೆಂಕಟೇಶ್‌
ತಾರಾಗಣ: ರಾಜ್‌ಕುಮಾರ್‌, ಲೀಲಾವತಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್‌ ನಾಡ ಜಯಭೇರಿ ನಾವಾದೆವೆನ್ನಿ
ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೊಳೆತಿರುವ ಭೇದಗಳ ಬಿಟ್ಟು ಬನ್ನಿ

ಚಿತ್ರ: ಚಲಿಸುವ ಮೋಡಗಳು
ಸಾಹಿತ್ಯ: ಚಿ.ಉದಯ್‌ಶಂಕರ್‌
ಸಂಗೀತ: ರಾಜನ್‌ ನಾಗೇಂದ್ರ
ಗಾಯಕರು: ಡಾ.ರಾಜ್‌ಕುಮಾರ್‌, ಎಸ್‌.ಜಾನಕಿ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ

ಚಿತ್ರ: ಮೋಜುಗಾರ ಸೊಗಸುಗಾರ
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ವಿಷ್ಣುವರ್ಧನ್‌
ಕನ್ನಡದ ಸಿದ್ದ ಹಾಡೋದಕ್ಕೆ ಎದ್ದ
ಕನ್ನಡಕೆ ಇವನು ಸಾಯೋದಕ್ಕು ಸಿದ್ದ
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ
ಕಾಪಾಡೋ ಗುರು ಇವಳು

ಚಿತ್ರ: ನಾನು ನನ್ನ ಹೆಂಡ್ತಿ
ಸಾಹಿತ್ಯ: ಹಂಸಲೇಖ, ಸಂಗೀತ: ಶಂಕರ್‌-ಗಣೇಶ್‌
ಗಾಯಕರು: ಎಸ್‌.ಪಿ.ಬಿ
ತಾರಾಗಣ: ರವಿಚಂದ್ರನ್‌, ಊರ್ವಶಿ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ…

ಚಿತ್ರ: ಆಕಸ್ಮಿಕ
ಗಾಯಕರು: ಡಾ.ರಾಜ್‌ಕುಮಾರ್‌
ಹುಟ್ಟಿದರೆ ಕನ್ನಡ ನಾಡಲ… ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ..
ಬದುಕಿದು ಜಟಕಾ ಬಂಡಿ..
ವಿಧಿ ಅಲೆದಾಡಿಸುವ ಬಂಡಿ..
ಹುಟ್ಟಿದರೆ ಕನ್ನಡ ನಾಡಲ… ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
  
ಚಿತ್ರ: ಕೃಷ್ಣ ರುಕ್ಮಿಣಿ
ಗಾಯಕರು: ಎಸ್‌ಪಿಬಿ
ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ.
ಕರ್ನಾಟಕದ ಇತಿಹಾಸದಲಿ …

ಚಿತ್ರ: ತಿರುಗು ಬಾಣ
ಗಾಯಕರು: ಎಸ್‌.ಪಿ.ಬಿ
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ

ಚಿತ್ರ: ಪೋಸ್ಟ್‌ ಮಾಸ್ಟರ್‌
ಗಾಯಕರು: ಪಿ.ಬಿ.ಶ್ರೀನಿವಾಸ್‌
ಕನ್ನಡ ಕುಲದೇವಿ ಕಾಪಾಡು ಬಾ ತಾಯೇ
ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀನೆ
ಪ್ರೇಮ ಕರುಣೆಯ ಕಲಿಸಿ ಶಾಂತಿ ಸಹನೆಯ ಬೆಳೆಸಿ
ಕಾಮಕ್ರೋಧವನಳಿಸಿ ಕಾಪಾಡು ತಾಯೇ
ಒಂದಾದ ದೇಶದಲಿ ಹೊಂದಿ ಬಾಳದ ಸುತರ
ಹೊಸಬೆಸುಗೆಯಲಿ ಬಿಗಿದು ಒಂದು ಗೂಡಿಸು ತಾಯೇ

ಚಿತ್ರ: ವೀರ ಸಂಕಲ್ಪ
ಗಾಯಕರು: ಪೀಠಾಪುರಂ ನಾಗೇಶ್ವರರಾವ್‌
ಹಾಡು ಬಾ ಕೋಗಿಲೆ, ನಲಿದಾಡು ಬಾರೆ ನವಿಲೆ
ಸಿರಿಗನ್ನಡಾಂಬೆಯ ಜಯಧ್ವನಿ ಮೊಳಗಲಿ
ಹಾಡು ಬಾ ಕೋಗಿಲೆ
ನಲಿದಾಡು ಬಾರೆ ನವಿಲೆ

ಚಿತ್ರ: ನಾಗರಹಾವು, ಗಾಯಕರು: ಪಿ.ಬಿ. ಶ್ರೀನಿವಾಸ್‌
ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಚಿತ್ರ: ವಿಜಯನಗರದ ವೀರಪುತ್ರ
ಗಾಯಕರು: ಪಿ.ಬಿ. ಶ್ರೀನಿವಾಸ್‌
ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ
ಆಗಸದೆ ತೇಲುತಿದೆ ಮೋಡ
ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ
ಹಸಿ ಹಸಿರು ವನರಾಜಿ ನೋಡ …
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು

ಟೀಂ ಸುಚಿತ್ರಾ

Advertisement

Udayavani is now on Telegram. Click here to join our channel and stay updated with the latest news.

Next