ಮಂಗಳೂರು/ಉಡುಪಿ: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಯ ಮೊದಲ ದಿನದ ಪರೀಕ್ಷೆಯು ದಕ್ಷಿಣ ಕನ್ನಡದ 22 ಮತ್ತು ಉಡುಪಿ ಜಿಲ್ಲೆಯ 6 ಕೇಂದ್ರದಲ್ಲಿ ಶನಿವಾರ ಯಶಸ್ವಿಯಾಗಿ ನಡೆದಿದೆ. ರವಿವಾರವೂ ಪರೀಕ್ಷೆ ಇರಲಿದೆ.
ದ.ಕ.ದಲ್ಲಿ ಮೊದಲ ಪರೀಕ್ಷೆಗೆ 4,859 ಅಭ್ಯರ್ಥಿಗಳು ನೋಂದಾಯಿಸಿದ್ದು, 3,173 ಮಂದಿ ಹಾಜರಾಗಿದ್ದಾರೆ. 1,686 ಮಂದಿ ಗೈರಾಗಿದ್ದಾರೆ. ಅಪರಾಹ್ನ ನಡೆದ ಅಂಗ್ಲ ಭಾಷಾ ಶಿಕ್ಷಕರ ಆಯ್ಕೆ ಪರೀಕ್ಷೆಯಲ್ಲಿ ನೋಂದಣಿ ಮಾಡಿದ್ದ 632 ಅಭ್ಯರ್ಥಿಗಳ ಪೈಕಿ 361 ಮಂದಿ ಹಾಜರಾಗಿ 271 ಮಂದಿ ಗೈರಾಗಿದ್ದಾರೆ. ಈ ಪರೀಕ್ಷೆ ಮಂಗಳೂರಿನ ಮೂರು ಪರೀಕ್ಷಾ ಕೇಂದ್ರದಲ್ಲಿ ನಡೆಯಿತು.ಪ್ರತೀ ಕೊಠಡಿಯಲ್ಲಿ 20 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ದ.ಕ. ಉಪನಿರ್ದೇಶಕ ಸುಧಾಕರ್ “ಉದಯವಾಣಿ’ ಜತೆಗೆ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ, ಕುಡಿಯುವ ನೀರಿನ ವ್ಯವಸ್ಥೆ, ಹೆಚ್ಚುವರಿ ಕೊಠಡಿ ವ್ಯವಸ್ಥೆ, ವಿಶೇಷ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ, ವೀಡಿಯೋ ಕವರೇಜ್ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನ ಪರೀಕ್ಷೆ ಸುಸೂತ್ರವಾಗಿ ನಡೆದಿದೆ’ ಎಂದರು.
ಉಡುಪಿ ಜಿಲ್ಲೆ
ಉಡುಪಿ ಜಿಲ್ಲೆಯಲ್ಲಿ ಪತ್ರಿಕೆ-1ಕ್ಕೆ 1,506 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 324 ಮಂದಿ ಗೈರು ಹಾಜರಾಗಿದ್ದು, 1,182 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಳಕಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪೇಪರ್-2 ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 113 ಅಭ್ಯರ್ಥಿಗಳಲ್ಲಿ 25 ಮಂದಿ ಗೈರು ಹಾಜರಾಗಿದ್ದು, 88 ಮಂದಿ ಪರೀಕ್ಷೆ ಬರೆದಿದ್ದಾರೆ.
ಯು. ಕಮಲಾಬಾಯಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬರು ಒಂದು ಗಂಟೆ ತಡವಾಗಿ ಬಂದಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಸರಕಾರದ ನಿಯಮದಂತೆ ಪರೀಕ್ಷೆ ನಡೆಸಬೇಕಾಗುತ್ತದೆ. ವಿಳಂಬವಾಗಿ ಬಂದವರಿಗೆ ಪರೀಕ್ಷೆ ನಡೆಸಲು ಅವಕಾಶ ಇರುವುದಿಲ್ಲ. ಅಭ್ಯರ್ಥಿಯ ಜತೆಗೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ ಬೇರೆ ಯಾವುದೇ ಕಡೆಗಳಲ್ಲಿ ಸಮಸ್ಯೆಯಾಗಿಲ್ಲ ಎಂದು ಡಿಡಿಪಿಐ ಗೋವಿಂದ ಮಡಿವಾಳ ತಿಳಿಸಿದರು.