“ಗೌಡ್ರು ಹೋಟೆಲ್’ ಎಂಬ ಚಿತ್ರ ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರದ ಚಿತ್ರೀಕರಣ ಮುಗಿದು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ಚಿತ್ರದ ಹಾಡುಗಳ ಪ್ರದರ್ಶನದ ಜೊತೆಗೆ ಆ ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕುವ ಮೂಲಕ ಅದ್ಧೂರಿಯಾಗಿಯೇ ಆಡಿಯೋ ಬಿಡುಗಡೆ ಮಾಡಿತು ಚಿತ್ರತಂಡ.
ಈ ಚಿತ್ರವನ್ನು ಪಿ.ಕುಮಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ರಮೇಶ್ ಶಿವ, ಸತೀಶ್ ಹಾಗೂ ಸತ್ಯನ್ ಸೇರಿ ನಿರ್ಮಿಸಿದ್ದಾರೆ. ರಚನ್ ಈ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟರೆ, ವೇದಿಕಾ ನಾಯಕಿ. “ಗೌಡ್ರು ಹೋಟೆಲ್’ಗೆ ಸಂಗೀತ ನೀಡುವ ಮೂಲಕ ಯುವನ್ ಶಂಕರ್ ರಾಜಾ ಕನ್ನಡಕ್ಕೆ ಬಂದಿದ್ದಾರೆ. ಯುವನ್ ಶಂಕರ್ ರಾಜಾ ತಮ್ಮ ಹಾಡುಗಳ ಬಗ್ಗೆ ಹೆಚ್ಚೇನು ಮಾತನಾಡಲಿಲ್ಲ. “ನನ್ನ ಹಾಡುಗಳ ಬಗ್ಗೆ ನಾನು ಮಾತನಾಡೋದು ಸರಿಯಲ್ಲ. ಹಾಡುಗಳು ಕೇಳಿ ನೀವು ಮಾತನಾಡಬೇಕು. ಅದು ಬಿಟ್ಟರೆ “ಗೌಡ್ರು ಹೋಟೆಲ್’ ಒಳ್ಳೆಯ ಅನುಭವ ಕೊಟ್ಟ ಸಿನಿಮಾ. ಪಕ್ಕಾ ಪ್ರೊಫೆಶನಲ್ ತಂಡದ ಜೊತೆ ಸಿನಿಮಾ ಮಾಡಿದ ಖುಷಿ ಇದೆ ಎಂದರು.
ಚಿತ್ರದಲ್ಲಿ ನಾಯಕರಾಗಿ ನಟಿಸಿದ ರಚನ್ ಅವರಿಗೆ ಮೊದಲ ಸಿನಿಮಾವಾದ್ದರಿಂದ ಹೇಗೋ ಏನೋ ಎಂಬ ಭಯ ಇತ್ತಂತೆ. ಆದರೆ, ಶೂಟಿಂಗ್‌ನಲ್ಲಿ ಆ ಭಯ ಹೋಯಿತಂತೆ. ಸ್ನೇಹಿತರೆಲ್ಲಾ, “ನೀನು ಆ್ಯಕ್ಟಿಂಗ್ ಹೇಗೆ ಕಲಿತೆ’ ಎಂದಾಗ, “ಅಪ್ಪನಿಗೆ ಸುಳ್ಳು ಹೇಳುವ ಮೂಲಕ ಆ್ಯಕ್ಟಿಂಗ್ ಕಲಿತೆ’ ಎಂದು ಉತ್ತರಿಸುತ್ತಿದ್ದರಂತೆ ರಚನ್. ಚಿತ್ರದಲ್ಲಿ ಅನಂತ್‌ನಾಗ್ ಕೂಡಾ ಪ್ರಮುಖ ಪಾತ್ರ ಮಾಡಿದ್ದು, ಅವರ ಜೊತೆ ನಟಿಸಿದ್ದು ರಚನ್ ಗೆ ಖುಷಿಕೊಟ್ಟಿದೆಯಂತೆ. ನಾಯಕಿ ವೇದಿಕಾ ನಿರ್ದೇಶಕರ ತಾಳ್ಮೆಯ ಬಗ್ಗೆ ಮೆಚ್ಚುಗೆ ಸೂಚಿಸುವ ಜೊತೆಗೆ ಅನಂತ್‌ನಾಗ್ ಅವರ ಜೊತೆ ತಮಗೆ ಯಾವುದೇ ದೃಶ್ಯವಿಲ್ಲದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ಚಿತ್ರದಲ್ಲಿ ನಟಿಸಿರುವ ಅನಂತ್‌ನಾಗ್ ಅವರಿಗೆ “ಗೌಡ್ರು ಹೋಟೆಲ್’ ತಂಡದ ಕೆಲಸ ಖುಷಿಯಾಗಿದೆ. ಅದರಲ್ಲೂ ನಿರ್ದೇಶಕ ಪಿ. ಕುಮಾರ್ ಕೆಲಸ ತೃಪ್ತಿಕೊಟ್ಟಿದೆ. “ಸಾಮಾನ್ಯವಾಗಿ ಈಗಿನ ನಿರ್ದೇಶಕರು ಮಾನಿಟರ್ ಮುಂದೆ ಕುಳಿತೇ “ಹಾಗೆ ಮಾಡಿ, ಹೀಗೆ ಮಾಡಿ’ ಎನ್ನುತ್ತಾರೆ. ಚೇರ್‌ನಿಂದ ಎದ್ದು ಬಂದು ಓಡಾಡಿ ನಿರ್ದೇಶನ ಮಾಡುವುದಿಲ್ಲ. ಆದರೆ, ನಿರ್ದೇಶಕ ಪಿ.ಕುಮಾರ್ ಅವರನ್ನು ನೋಡಿ ಖುಷಿಯಾಯಿತು. ಮಾನಿಟರ್ ಮುಂದಿನ ಅವರ ಚೇರ್ ಯಾವತ್ತೂ ಖಾಲಿ ಇರುತ್ತಿತ್ತು. ಅಷ್ಟೊಂದು ಓಡಾಡಿ, ಕಲಾವಿದರಿಗೆ ಹೇಳಿಕೊಡುತ್ತಿದ್ದರು. ಮುಖ್ಯವಾಗಿ ಛಾಯಾಗ್ರಾಹಕರ ಹಾಗೂ ನಿರ್ದೇಶಕರ ನಡುವೆ ಒಳ್ಳೆಯ ಹೊಂದಾಣಿಕೆ ಇತ್ತು’ ಎಂದು ತಮ್ಮ ಅನುಭವ ಹಂಚಿಕೊಂಡರು ಅನಂತ್‌ನಾಗ್.
ನಿರ್ದೇಶಕ ಪಿ.ಕುಮಾರ್ ಚಿತ್ರೀಕರಣದ ವೇಳೆ ನಿರ್ಮಾಪಕರಲ್ಲಿ ಸಿಟ್ಟುಮಾಡಿಕೊಂಡಿದ್ದಕ್ಕೆ ಕ್ಷಮೆ ಕೇಳುತ್ತಲೇ ಮಾತಿಗಿಳಿದರು. ಪಿ.ಕುಮಾರ್ ಅಂದು ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಲು ಹಾಗೂ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲು ಆ ವೇದಿಕೆಯನ್ನು ಬಳಸಿಕೊಂಡರು. ಚಿತ್ರದಲ್ಲಿ ಪ್ರಕಾಶ್ ರೈ ಹಾಗೂ ಅನಂತ್‌ನಾಗ್ ನಟಿಸಿದ್ದು, ಅವರಿಬ್ಬರು ನಟಿಸುತ್ತಿದ್ದರೆ ಶಾಟ್ ಕಟ್ ಮಾಡೋಕೆ ಕುಮಾರ್‌ಗೆ ಮನಸ್ಸು ಬರುತ್ತಿರಲಿಲ್ಲವಂತೆ. ಇನ್ನು, ಚಿತ್ರದ ನಾಯಕಿ ವೇದಿಕಾ ಅವರ ಸರಳ ಗುಣವನ್ನು ಮೆಚ್ಚಿಕೊಂಡರು. ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಕೊಟ್ಟ ಟ್ಯೂನ್‌ಗಳು ಬೇಗನೇ ಓಕೆಯಾಗಿದ್ದರ ಬಗ್ಗೆಯೂ ಮಾತನಾಡಿದರು ಕುಮಾರ್.
ನಿರ್ಮಾಪಕರಾದ ರಮೇಶ್ ಶಿವ, ಸತೀಶ್ ಹಾಗೂ ಸತ್ಯನ್ ಕೂಡಾ ಸಿನಿಮಾ ಚೆನ್ನಾಗಿ ಮೂಡಿ ಬಂದ ಖುಷಿ ಹಂಚಿಕೊಂಡರು.