ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ನಡೆಯುತ್ತಿರುವ ಮಕ್ಕಳ ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಎರಡನೇ ದಿನವೂ ಚಿಣ್ಣರ ಸಂಭ್ರಮ ಮನೆ ಮಾಡಿತ್ತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಿದ ಪುಟಾಣಿಗಳು ಪ್ರೇಕ್ಷಕರ ಮನತಣಿಸಿದರು.
ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪುಟ್ಟಾಣಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮನು ವಿದ್ಯಾ ಕಲ್ಚರಲ್ ಫೌಂಡೇಷನ್‌ನ ಮಕ್ಕಳು ಪ್ರದರ್ಶಿಸಿದ ಭರತನಾಟ್ಯ ನೃತ್ಯ ರೂಪಕವು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು.
ಬಳಿಕ ಬೋಗಾದಿ ರಸ್ತೆಯಲ್ಲಿರುವ ಗಂಗೋತ್ರಿ ಶಾಲೆಯ ಮಕ್ಕಳ ಡೊಳ್ಳುಕುಣಿತದ ನೃತ್ಯ ಎಲ್ಲರನ್ನು ರಂಜಿಸಿತು. ಇನ್ನು ಪಿರಿಯಪಟ್ಟಣ ತಾಲೂಕಿನ ಮುತ್ತೂರು ಗಿರಿಜನ ಆಶ್ರಮ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಪ್ರಕೃತಿ ದೇವಿಯ ಗೀತೆಯೊಂದಕ್ಕೆ ಹೆಜ್ಜೆಹಾಕಿ ಗಮನ ಸೆಳೆದರು.
ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ದಸರಾ ಹಬ್ಬಕ್ಕೆ ವಿಶೇಷ ಆತಿಥಿಗಳಾಗಿ ನಗರಕ್ಕಾಗಮಿಸಿರುವ ಮಾವುತರು, ಕಾವಾಡಿಗರ ಮಕ್ಕಳು ನೀಡಿದ ನೃತ್ಯ ಪ್ರದರ್ಶನ ಎಲ್ಲರ ಚೆಪ್ಪಾಳೆ ಗಿಟ್ಟಿಸಿತು. ದಸರೆಯ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ ಮಾವುತರು ಹಾಗೂ ಕಾವಾಡಿಗಳ ಮಕ್ಕಳು ತಮ್ಮದೆ ಹಾಡಿಯ ಹಾಡು, ಕುಣಿತವನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ಮನಗೆದ್ದರು.
ಉಳಿದಂತೆ ಶ್ರೀರಾಂಪುರದ ನಿರ್ಮಲಾ ಶಾಲೆ ವಿದ್ಯಾರ್ಥಿಗಳು, ಸ್ಯಾಂಡಲ್ ರೋಸ್ ಕಾನ್ವೆಂಟ್, ಸತ್ಯ ಸಾಯಿ ಬಾಬಾ, ಸಿಎಸಿ ಕಾನ್ವೆಂಟ್ ವಿದ್ಯಾರ್ಥಿಗಳು ವಿಶೇಷ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.