ಹಿಸಾರ್ : ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಕುರಿತು ಸಿಬಿಐ ತನಿಖೆಗೆ ನೀಡಿದ ಕೇಂದ್ರದ ನಿರ್ಧಾರವನ್ನು ಅವರ ಕುಟುಂಬ ಸೋಮವಾರ ಸ್ವಾಗತಿಸಿದೆ.
ಸೋನಾಲಿ ಅವರ ಸಹೋದರ ರಿಂಕು ಫೋಗಟ್, “ನಮ್ಮ ಕುಟುಂಬವು ಮೊದಲಿನಿಂದಲೂ ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಿತ್ತು.ಆಕೆಯ ಸಾವಿನ ಹಿಂದೆ ಸಂಚು ಇದೆ, ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ. ಏಜೆನ್ಸಿ ಈ ವಿಷಯವನ್ನು ಆಳವಾಗಿ ತನಿಖೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪತ್ರದಲ್ಲಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಸೋಮವಾರ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸಿದೆ.
ಹರಿಯಾಣದ ಹಿಸಾರ್‌ನ ಬಿಜೆಪಿ ಮುಖಂಡ ಫೋಗಟ್ (43) ಕಳೆದ ತಿಂಗಳು ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದನ್ನು ಕೊಲೆ ಎಂದು ಪರಿಗಣಿಸಲಾಗುತ್ತಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಸುಧೀರ್ ಸಂಗ್ವಾನ್, ಮತ್ತೊಬ್ಬ ಸಹಾಯಕ ಸುಖ್ವಿಂದರ್ ಸಿಂಗ್ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ.
ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾವಂತ್, ಗೋವಾ ಪೊಲೀಸರು ಪ್ರಕರಣದ ಬಗ್ಗೆ ಅತ್ಯಂತ ಉತ್ತಮ ತನಿಖೆ ಮಾಡಿದ್ದಾರೆ ಮತ್ತು ಕೆಲವು ಸುಳಿವುಗಳನ್ನು ಸಹ ಪಡೆದಿದ್ದಾರೆ. ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಜನರು ಒತ್ತಾಯಿಸಿದ್ದರು. ನಮ್ಮ ಗೋವಾ ಪೊಲೀಸರ ಮೇಲೆ ಸಂಪೂರ್ಣ ನಂಬಿಕೆಯಿದೆ. ಅವರ ತನಿಖೆಯೂ ಸರಿಯಾದ ದಿಕ್ಕಿನಲ್ಲಿತ್ತು. ಆದರೆ ಜನರ ಬೇಡಿಕೆಯ ಮೇರೆಗೆ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುತ್ತಿರುವುದಾಗಿ ಹೇಳಿದರು.