ಮುಂಬಯಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಭಾನುವಾರ(ಜೂ.23 ರಂದು) ತನ್ನ ಪ್ರಿಯಕರ ಜಹೀರ್ ಇಕ್ಬಾಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ವಿವಾಹದ ಕಾರ್ಯಕ್ರಮಗಳು ಆರಂಭವಾಗಿದ್ದು ಮೆಹೆಂದಿ ಸಮಾರಂಭದ ಫೋಟೋಗಳು ವೈರಲ್ ಆಗಿದೆ.
ಮದುವೆಯ ಬಳಿಕ ಸೋನಾಕ್ಷಿ ಸಿನ್ಹಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎನ್ನುವ ಮಾತುಗಳು ಹರಿದಾಡಿತ್ತು. ಇದೀಗ ಈ ಬಗ್ಗೆ ಜಹೀರ್ ಅವರ ತಂದೆ, ಉದ್ಯಮಿ ಇಕ್ಬಾಲ್ ರತ್ನಾಸಿ ಅವರು ಸ್ಪಷ್ಟನೆ ನೀಡಿದ್ದಾರೆ.
ʼಪ್ರೀ ಪ್ರೆಸ್ ಜರ್ನಲ್ʼ ಜೊತೆ ಮಾತನಾಡಿರುವ ಅವರು, “ಸೋನಾಕ್ಷಿ – ಜಹೀರ್ ಮದುವೆ ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ನಡೆಯಲಿದೆ. ಮದುವೆ ಬಳಿಕ ಸೋನಾಕ್ಷಿ ಇಸ್ಲಾಂಗೆ ಮತಾಂತರಗೊಳ್ಳುವುದಿಲ್ಲ. ಈ ಮದುವೆ ಹಿಂದೂ ಅಥವಾ ಮುಸ್ಲಿಂ ಆಚರಣೆಗಳನ್ನು ಹೊಂದಿರುವುದಿಲ್ಲ, ಇದೊಂದು ನಾಗರಿಕ ವಿವಾಹವಾಗಿರುತ್ತದೆ” ಎಂದಿದ್ದಾರೆ.
“ಈ ಮದುವೆ ಹೃದಯಗಳ ಒಕ್ಕೂಟದಿಂದ ನಡೆಯುತ್ತದೆ. ಇಲ್ಲಿ ಧರ್ಮಕ್ಕೆ ಯಾವುದೇ ಪಾತ್ರವಿಲ್ಲ. ನಾನು ಮಾನವೀಯತೆಯನ್ನು ನಂಬುತ್ತೇನೆ. ದೇವರನ್ನು ಹಿಂದೂಗಳು ಭಗವಾನ್ ಮತ್ತು ಮುಸ್ಲಿಮರು ಅಲ್ಲಾ ಎಂದು ಕರೆಯುತ್ತಾರೆ. ಆದರೆ ದಿನದ ಕೊನೆಯಲ್ಲಿ, ನಾವೆಲ್ಲರೂ ಮನುಷ್ಯರು. ನನ್ನ ಆಶೀರ್ವಾದ ಜಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆ” ಎಂದು ಅವರು ಹೇಳಿದ್ದಾರೆ.
ತಮ್ಮ ನೋಂದಾಯಿತ ವಿವಾಹದ ನಂತರ, ಸೋನಾಕ್ಷಿ ಮತ್ತು ಜಹೀರ್ ಮುಂಬೈನ ಬಾಸ್ಟಿಯನ್‌ನಲ್ಲಿ ಮದುವೆಯ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ಸೋನಾಕ್ಷಿಯ ಪೋಷಕರಾದ ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ ಸಲ್ಮಾನ್ ಖಾನ್, ಹುಮಾ ಖುರೇಷಿ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗುವ ಸಾಧ್ಯತೆಯಿದೆ.
ಕಳೆದ 7 ವರ್ಷಗಳಿಂದ ಸೋನಾಕ್ಷಿ – ಜಹೀರ್ ಡೇಟಿಂಗ್ ನಲ್ಲಿದ್ದರು.