ಪೆರ್ಲ: ಪಡ್ರೆ ಕುಂಟಿಕಾನ ಅರಳಿಕಟ್ಟೆ ನಿವಾಸಿ ಐತ್ತಪ್ಪ ಅವರ ಪುತ್ರ ಸುಂದರ ನಾಯ್ಕ (55) ಅವರ ಸಾವು ಕೊಲೆ ಎಂಬುದಾಗಿ ಮೇಲ್ನೋಟಕ್ಕೆ ಖಚಿತಗೊಂಡಿರುವುದಾಗಿ ತನಿಖೆ ನಡೆಸುತ್ತಿರುವ ಬದಿಯಡ್ಕ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮೃತರ ಪುತ್ರ ಜಯಂತ, ಸಹೋದರ ಈಶ್ವರ ನಾಯ್ಕ ಹಾಗೂ ಇವರ ಪುತ್ರ ಪ್ರಭಾಕರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವುದಾಗಿ ತಿಳಿದು ಬಂದಿದ್ದು, ಅವರ ಬಂಧನಕ್ಕೆ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜ. 30ರಂದು ರಾತ್ರಿ 9.30ಕ್ಕೆ ಪುತ್ರ ಜಯಂತ ಮನೆಗೆ ಬಂದಾಗ ಸುಂದರ ನಾಯ್ಕ ಗಲಾಟೆ ನಡೆಸುತ್ತಿದ್ದರು. ಇದನ್ನು ಪ್ರಶ್ನಿಸಿದಾಗ ಜಗಳವಾಗಿದ್ದು, ಈ ಸಂದರ್ಭ ತಲೆಗೆ ಏಟು ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಪೆರ್ಲದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಕೂಡಲೇ ಕಾಸರಗೋಡು ಅಥವಾ ಮಂಗಳೂರಿಗೆ ಕೊಂಡೊಯ್ಯುವಂತೆ ಸೂಚಿಸಿದ್ದರೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೆರ್ಲದ ಆಸ್ಪತ್ರೆಯ ವೈದ್ಯರಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಸುಂದರ ನಾಯ್ಕರ ಮನೆಗೆ ತೆರಳಿದ ಪೊಲೀಸರು ತನಿಖೆ ನಡೆಸಿದಾಗ ಮನೆ ಅಂಗಳದಲ್ಲಿ ಹೊಡೆದಾಟ ನಡೆದ ಕುರುಹು ಹಾಗೂ ರಕ್ತದ ಕಲೆಗಳು ಕಂಡು ಬಂದಿವೆ. ರಕ್ತ ಕಾಣದಂತೆ ಅದರ ಮೇಲೆ ಸೆಗಣಿ ಸಾರಿಸಲಾಗಿದೆ. ತನಿಖೆ ಅಂಗವಾಗಿ ಮನೆಗೆ ಪೊಲೀಸರು ಕಾವಲು ಏರ್ಪಡಿಸಲಾಗಿದ್ದು, ಫೋರೆನ್ಸಿಕ್ ತಜ್ಞರು ಮನೆಯಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುಂದರ ನಾಯ್ಕರ ಸಹೋದರ, ಮಣಿಯಂಪಾರೆಯ ನಾರಾಯಣ ನಾಯ್ಕ ಅವರು ಎಸ್‌ಎಪಿಗೆ ದೂರು ನೀಡಿದ್ದರು. ಬಳಿಕ ಪೊಲೀ ಸರು ತನಿಖೆ ನಡೆ ಸಿ ದಾಗ ಪ್ರಕರಣ ಬಹಿರಂಗಗೊಂಡಿದೆ.
ಸಂಬಂಧಿಕರಿಗೆ ತಿಳಿಸದೆ ಅಂತ್ಯಸಂಸ್ಕಾರ
ಸುಂದರ ನಾಯ್ಕರನ್ನು ಕಾಸರಗೋಡು ಅಥವಾ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲು ವೈದ್ಯರು ಸೂಚಿಸಿದ್ದರೂ ಜತೆಗಿದ್ದವರು ನೇರವಾಗಿ ಮನೆಗೆ ತಂದಿದ್ದರು. ಮರುದಿನ ಮುಂಜಾನೆಯೊಳಗೆ ಮೃತದೇಹವನ್ನು ಶವ ದಹಿಸುವ ಕಬ್ಬಿಣದ ಪೆಟ್ಟಿಗೆ ಬಳಸಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಆದರೆ ಇವರು ಸಾವಿಗೀಡಾದ ಬಗ್ಗೆ ಸ್ವಂತ ಸಹೋದರ ಸಹಿತ ಸಂಬಂಧಿಕರ್ಯಾರಿಗೂ ತಿಳಿಸಿರಲಿಲ್ಲ ಎನ್ನಲಾಗಿದೆ.