ಬೆಂಗಳೂರು: ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ ಷೋ ರೂಮ್ ನಲ್ಲಿ ಲ್ಯಾಪ್‌ಟಾಪ್, ಪೆನ್‌ಡ್ರೈವ್‌ಗಳನ್ನು ಕಳವು ಮಾಡಿದ್ದ ಮಾರಾಟ ಪ್ರತಿನಿಧಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿ ನಿವಾಸಿ ಆರ್. ಶ್ರೀನಿವಾಸ(21) ಬಂಧಿತ ಮಾರಾಟ ಪ್ರತಿನಿಧಿ. ಆರೋಪಿ ಯಿಂದ 1.5 ಲಕ್ಷ ರೂ. ಮೌಲ್ಯದ 3 ಲ್ಯಾಪ್‌ಟಾಪ್ ಹಾಗೂ 5 ಪೆನ್ ಡ್ರೈವ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರಿನ ಎನ್.ಆರ್.ಮೋಹಲ್ಲಾ ಮೂಲದ ಶ್ರೀನಿ ವಾಸ್, 6 ತಿಂಗಳಿಂದ ಠಾಣೆ ವ್ಯಾಪ್ತಿಯ ಎಲೆಕ್ಟ್ರಾ ನಿಕ್ ಷೋರೂಮ್‌ನಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದ. ಈ ಮಧ್ಯೆ ಆರ್ಥಿಕ ಸಮಸ್ಯೆ ಉಂಟಾಗಿದ್ದರಿಂದ ತನ್ನ ಮಾಸಿಕ ವೇತನದಿಂದ ದೈನಂದಿನ ಖರ್ಚು ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಆರೋಪಿ ತಾಯಿಗೆ ವಯೋಸಹಜ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಆಕೆಯ ಚಿಕಿತ್ಸೆ ವೆಚ್ಚ ಭರಿಸಲು ಕೆಲಸ ಮಾಡುತ್ತಿದ್ದ ಷೋ ರೂಮ್‌ನಲ್ಲೇ ಕಳ್ಳತನ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹೀಗಾಗಿ ಜೂನ್‌ನಲ್ಲಿ ಷೋ ರೂಮ್‌ಗೆ ಬಂದಿದ್ದ 3 ಲಾಪ್‌ಟಾಪ್, 16 ಪೆನ್‌ಡ್ರೈವ್‌ಗಳನ್ನು ಕಳವು ಮಾಡಿ ದ್ದಾನೆ. ಈ ಸಂಬಂಧ ಷೋರೂಮ್ ಮಾಲೀಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಅನುಮಾನದ ಮೇರೆಗೆ ಎಲ್ಲಾ ಸಿಬ್ಬಂದಿ ವಿಚಾರಣೆ ನಡೆಸುವಾಗ ಆರೋಪಿಯ ವರ್ತನೆಯಿಂದ ಅನುಮಾನಗೊಂಡು ತೀವ್ರ ರೀತಿ ಯಲ್ಲಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಕಡಿಮೆ ಮೊತ್ತಕ್ಕೆ ಮಾರಾಟ : ಆರೋಪಿ ಕಳವು ಮಾಡಿದ ಲ್ಯಾಪ್‌ಟಾಪ್, ಪೆನ್‌ಡ್ರೈವ್ ಪೈಕಿ 1 ಲ್ಯಾಪ್‌ಟಾಪ್ ಮತ್ತು 11 ಪೆನ್‌ಡ್ರೈವ್‌ಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿದ್ದ. ಆದರೆ, ಆ ವ್ಯಕ್ತಿಗಳು ಯಾರೆಂದು ಆರೋಪಿಗೆ ಗೊತ್ತಿಲ್ಲ. ಹೀಗಾಗಿ ಆತನ ಮನೆಯಲ್ಲಿಟ್ಟದ್ದ ಲ್ಯಾಪ್ ಟಾಪ್ ಮತ್ತು ಪೆನ್‌ಡ್ರೈವ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ಹೇಳಿದರು.
ಠಾಣಾಧಿಕಾರಿ ಎಚ್.ಮುತ್ತುರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.